ಅ.9 ರಿಂದ ರೈತ ಅನುವುಗಾರರನ್ನು ಮುಂದುವರಿಸುವಂತೆ ಆಗ್ರಹಿಸಿ ಧರಣಿ
ಬೆಂಗಳೂರು, ಅ.7: ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಅನುವುಗಾರರನ್ನು ಯಾವುದೇ ಕಾರಣ ಇಲ್ಲದೆ ತೆಗೆದುಹಾಕಿರುವುದನ್ನು ಖಂಡಿಸಿ ಹಾಗೂ ಅವರನ್ನು ಮರು ನೇಮಕ ಮಾಡಿಕೊಳ್ಳಬೇಕು, ಕನಿಷ್ಠ ವೇತನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅ.9 ರಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಹೈದ್ರಾಬಾದ್ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಧರಣಿ ಹಮ್ಮಿಕೊಂಡಿದ್ದು, ಅ.9 ರಂದು ನಗರದ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವದವರೆಗೂ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ಅನಂತರ ನಮ್ಮ ಬೇಡಿಕೆಗಳು ಈಡೇರುವವರೆಗೂ ಧರಣಿ ನಡೆಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ದಯಾನಂದ ಸಿ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ಯೋಜನೆಯ ಮಾರ್ಗದರ್ಶಿ ಸಹಾಯಕರಾಗಿ(ಅನುವುಗಾರರು) 2008-09ನೇ ಸಾಲಿನಲ್ಲಿ ಸುಮಾರು 9617 ಮಂದಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, 2015ರಲ್ಲಿ ಅನಿರೀಕ್ಷಿತವಾಗಿ 5417 ಮಂದಿ ಅನುವುಗಾರರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇದರಿಂದಾಗಿ ಅನುವುಗಾರರು ಸಾಕಷ್ಟು ಅನ್ಯಾಯಕ್ಕೊಳಗಾದರು. ಹೀಗಾಗಿ, ಮರುನೇಮಕ ಮಾಡಿಕೊಳ್ಳುವಂತೆ ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆದುದರಿಂದ ಎಲ್ಲರೂ ಒಗ್ಗಟ್ಟಿನಿಂದ ಧರಣಿಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ಕೂಡಲೇ ಸರಕಾರ ರೈತ ಅನುವುಗಾರರನ್ನು ಮರುನೇಮಕ ಮಾಡಿಕೊಂಡು ವರ್ಷದ ಪೂರ್ಣಾವಧಿಯ ಕೆಲಸ ನೀಡಬೇಕು. ಅವರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಬ್ಬರು ರೈತ ಅನುವುಗಾರರನ್ನು ನೇಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರಾಜೇಶ್ವರಿ ಮಾದಣ್ಣ, ಅಮರೇಗೌಡ, ವೆಂಕನಗೌಡ, ಶಂಕರಪ್ಪ ಚೌಡಿ, ರುದ್ರಮುನಿಗಾಳಿ ಉಪಸ್ಥಿತರಿದ್ದರು.