ಮರು ಭೂಮಿಯಂತಾಗುತ್ತಿರುವ ಸಂಬಂಧಗಳು: ಕವಿ ದೊಡ್ಡರಂಗೇಗೌಡ
ಬೆಂಗಳೂರು, ಅ.7: ಆಧುನಿಕ ಜೀವನ ಶೈಲಿಯಿಂದ ಮಾನವೀಯ ಸಂಬಂಧಗಳು ಅಪವೌಲ್ಯಗೊಳ್ಳುವ ಮೂಲಕ ಮರುಭೂಮಿಯಾಗಿ ಬದಲಾಗುತ್ತಿವೆ ಎಂದು ಕವಿ ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಕಸಾಪದಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ವಿಜಯಲಕ್ಷ್ಮೀ ಸತ್ಯಮೂರ್ತಿ ಅವರ ಗಂಧದೋಕುಳಿ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಲಿವಿಂಗ್ ಟುಗೆದರ್ ಎಂಬ ಪರಿಕಲ್ಪನೆ ಹುಟ್ಟಿದ ಮೇಲೆ ದೇಶದಲ್ಲಿ ಪ್ರೀತಿ, ಮಾನವೀಯ ಸಂಬಂಧಗಳು ವೌಲ್ಯ ಕಳೆದುಕೊಳ್ಳುತ್ತಿದೆ. ಪ್ರೀತಿ ಎಂಬುವುದು ದೇಹ ವಿನಿಮಯ ಮಾಡಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ ಎಂಬ ಅನುಮಾನ ಕಾಡುತ್ತಿದೆ. ಲೇಖಕಿ ರಚಿಸಿರುವ ಗಂಧದೋಕುಳಿ ಕಾದಂಬರಿಯಲ್ಲಿ ನೈಜ ಭಾವುಕ ಸಂಬಂಧಗಳು ಅಕ್ಷರಗಳ ಮೂಲಕ ದಾಖಲಾಗಿದೆ ಎಂದು ಹೇಳಿದರು.
ಕೃತಿಯಲ್ಲಿ ಆಡಂಬರ, ನೈತಿಕತೆ, ಬೌದ್ಧಿಕತೆ ಇಲ್ಲ. ಅತ್ಯಂತ ಸರಳವಾದ ಪದಗಳಿಂದ ಕೂಡಿದ ಪ್ರೀತಿಯ ಮಗ್ಗುಲುನಿಂದ ಗಂಧದೋಕುಳಿಯನ್ನು ರಚಿಸಿದ್ದಾರೆ. ಲೇಖಕಿ ಮುಂದಿನ ಕೃತಿಗಳಲ್ಲಿ ಬದುಕಿನ ಎಲ್ಲ ಮಗ್ಗಲುಗಳನ್ನು ಅನ್ವಯಿಸಿ ಬರೆಯಬೇಕು ಎಂದು ಸಲಹೆ ನೀಡಿದರು.
ಇವತ್ತಿನ ಲೇಖಕಿಯರು ಮೈ ಚಳಿ ಬಿಟ್ಟು ಬರೆಯುತ್ತಿದ್ದಾರೆ. ಲೇಖಕರನ್ನು ನಾಚಿಸುವಷ್ಟು ಸಾಹಿತ್ಯವನ್ನು ನೀಡುತ್ತಿದ್ದಾರೆ. ಕನ್ನಡದಲ್ಲಿ ಲೇಖಕಿಯರು ಮುನ್ನೆಲೆಗೆ ಬರಲು ಕರ್ನಾಟಕ ಲೇಖಕಿಯರ ಸಂಘ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ರಾಜರಾಂ ಮೋಹನ್ ರಾಯ್ ಮತ್ತು ಈಶ್ವರ್‌ಚಂದ್ರ ವಿದ್ಯಾಸಾಗರ್ ಅವರ ಹೋರಾಟದಿಂದ ದೇಶದಲ್ಲಿ ದೊಡ್ಡಮಟ್ಟದಲ್ಲಿ ಕ್ರಾಂತಿ ಉಂಟಾಯಿತು. ಇದಕ್ಕೆ ಪೂರಕವಾಗಿ ಬ್ರಿಟಿಷ್ ವೈಸ್‌ರಾಯ್ ಮೆಕಾಲೆಯವರ ಅಕ್ಷರ ಕ್ರಾಂತಿಯ ಪ್ರತಿಫಲವೇ ಇವತ್ತಿನ ಗಂಧದೋಕುಳಿ. ಇವತ್ತಿನ ಲೇಖಕಿಯರ ತಮ್ಮ ಕೃತಿಗಳನ್ನು ಈ ಮೂರು ಮಂದಿಗೆ ಅರ್ಪಿಸಬೇಕು ಎಂದು ಹೇಳಿದರು.
ಸ್ವಪ್ನ ಬುಕ್ ಹೌಸ್ ಕನ್ನಡ ಪುಸ್ತಕಗಳಿಗೆ ದೊಡ್ಡಮಟ್ಟದ ಉದ್ದಿಮೆ. ಕನ್ನಡ ಪುಸ್ತಕಗಳಿಗೆ ವಿಸ್ತಾರವಾದ ಮಾರುಕಟ್ಟೆಯನ್ನು ಈ ಸಂಸ್ಥೆ ಕಲ್ಪಿಸಿದೆ. ಕನ್ನಡ ಲೇಖಕರ ವಿಳಾಸದ ಕೋಶದಂತೆ ಸಪ್ನ್ ಬುಕ್ ಹೌಸ್ ಕಾರ್ಯನಿರ್ವಹಿಸುತ್ತಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಸಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ದೊಡ್ಡೇಗೌಡ, ವಿಮರ್ಶಕ ರಾಜೇಂದ್ರ ಪಾಟೀಲ, ಸಾಹಿತ್ಯ ಪರಿಚಾರಕ ರಾ.ನಂ.ಚಂದ್ರಶೇಖರ್, ಲೇಖಕಿ ವಿಜಯಲಕ್ಷ್ಮೀ ಸತ್ಯಮೂರ್ತಿ ಸೇರಿದಂತೆ ಇತರರು ಇದ್ದರು.