×
Ad

ಮೂರ ವರ್ಷಗಳಲ್ಲಿ ಒಂದೂವರೆ ಕೋಟಿ ಉದ್ಯೋಗ ಸೃಷ್ಟಿ: ಅನಂತ ಕುಮಾರ್

Update: 2017-10-07 20:14 IST

ಬೆಂಗಳೂರು, ಅ.7: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಲ್ಲಿ ಒಂದೂವರೆ ಕೋಟಿ ಉದ್ಯೋಗ ಸೃಷ್ಟಿ ಮಾಡಿದೆ ಎಂದು ಕೇಂದ್ರದ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.

ಶನಿವಾರ ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮುದ್ರಾ ಪ್ರೋತ್ಸಾಹ ಅಭಿಯಾನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೇರಿದಾಗಿನಿಂದ ಉದ್ಯೋಗವೇ ಸೃಷ್ಟಿಯಾಗಿಲ್ಲವೆಂದು ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಕಳೆದ 70ವರ್ಷಗಳಲ್ಲಿ ಮಾಡಲಾಗದ ಪ್ರಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಈ ಮೂರು ವರ್ಷದಲ್ಲಿ ಮಾಡಿದ್ದಾರೆ. ನಮ್ಮ ಸರಕಾರದ ಸಾಧನೆಗಳನ್ನು ಸಹಿಸಲಾರದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳು ಮುದ್ರಾ ಯೋಜನೆಯಡಿ 8 ಕೋಟಿ ಸ್ವಯಂ ಉದ್ಯೋಗಿಗಳಿಗೆ ಮೂರೂವರೆ ಲಕ್ಷ ಕೋಟಿ ರೂ.ರಿಯಾಯಿತಿ ದರದಲ್ಲಿ ಸಾಲ ನೀಡಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿಯೇ ಹೆಚ್ಚು ಫಲಾನುಭವಿಗಳಿಗೆ ಸಾಲ ವಿತರಣೆಯಾಗಿದೆ. ಮತ್ತಷ್ಟು ಸ್ವಯಂ ಉದ್ಯೋಗಾಕಾಂಕ್ಷಿಗಳು ಮುದ್ರಾ ಯೋಜನೆಯನ್ನು ಬಳಸಿಕೊಳ್ಳುವಂತೆ ಪ್ರೇರೇಪಿಸಲು ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಮುದ್ರಾ ಅಭಿಯಾನ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಿಂಡಿಕೇಟ್ ಬ್ಯಾಂಕ್‌ನ ವ್ಯವಸ್ಥಾಪಕ ಎಸ್.ಎಸ್.ಮಲ್ಲಿಕಾರ್ಜುನ್ ರಾವ್ ಮಾತನಾಡಿ, ಮುದ್ರಾ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದ್ದು, ಇಲ್ಲಿಯವರೆಗೂ 24,894 ಮಂದಿ ಯೋಜನೆಯ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರಿಯಾಯಿತಿ ದರದಲ್ಲಿ ಸಾಲ ಪಡೆದಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಮುದ್ರಾ ಫಲಾನುಭವಿಗಳಿಗೆ ಮುದ್ರಾ ಸಾಲ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ  ಸಂಸದ ಪಿ.ಸಿ.ಮೋಹನ್ ಮಾತನಾಡಿದರು. ಶಾಸಕ ಅಶ್ವತ್ಥ್ ನಾರಾಯಣ್, ಹಿರಿಯ ಐಎಎಸ್ ಅಧಿಕಾರಿ ವಿಜಯ್ ಭಾಸ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News