×
Ad

ಶ್ರಮಿಕರ ಶೋಷಣೆಯಿಂದ ಖಾಸಗಿ ಸಂಪತ್ತು ಹೆಚ್ಚಳ: ಡಾ.ಡಾ.ಬಿ.ಆರ್.ಮಂಜುನಾಥ್

Update: 2017-10-08 17:57 IST

ಬೆಂಗಳೂರು, ಅ. 8: ರೈತ, ಕಾರ್ಮಿಕ ಹಾಗೂ ಕೂಲಿ ಕಾರ್ಮಿಕರ ಶ್ರಮವನ್ನು ದೋಚಿ ಬಂಡವಾಳಶಾಹಿಗಳು ತಮ್ಮ ಖಾಸಗಿ ಸಂಪತ್ತನ್ನು ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ.ಬಿ.ಆರ್.ಮಂಜುನಾಥ್ ತಿಳಿಸಿದ್ದಾರೆ.

ರವಿವಾರ ಮಾಲೆ ಪ್ರಕಾಶನ ನಗರದ ಜ್ಯೋತಿ ಬಸು ಸಭಾಂಗಣದಲ್ಲಿ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಜನ್ಮ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣರವರ ‘ಮಿಥ್ಯೆಯ ಮಣಿಸುವ ಮಾನವ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ನಡುವೆ ಅನೇಕ ಬಗೆಯ ತತ್ವ ಸಿದ್ಧಾಂತಗಳಿದ್ದು, ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಪ್ರಜ್ಞಾ ಹಾಗೂ ಅಪ್ರಜ್ಞಾ ಪೂರ್ವಕವಾಗಿ ತಮ್ಮದೇ ಆದ ತತ್ವ ಸಿದ್ಧಾಂತವನ್ನು ಹೊಂದಿರುತ್ತಾರೆ. ಅದರಲ್ಲಿ ಜೀವ ಪರವಾದ ಹಾಗೂ ಜೀವ ವಿರೋಧಿಯಾದ ಎರಡೂ ತತ್ವಗಳು ಚಾಲ್ತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ಬಂಡವಾಳಶಾಹಿ ಪ್ರೇರಿತ ತತ್ವ ಸಿದ್ಧಾಂತ ಮುನ್ನೆಲೆಗೆ ಇದ್ದು, ರೈತ-ಕಾರ್ಮಿಕರನ್ನು ಶೋಷಿಸುವುದರ ಮೂಲಕ ಖಾಸಗಿ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಬಂಡವಾಳಶಾಹಿಗಳು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಜನರ ನಡುವೆ ಹಲವು ಮಿಥ್ಯೆಗಳನ್ನು ಭಿತ್ತಿದ್ದಾರೆ. ಇದರಲ್ಲಿ ಕಾರ್ಮಿಕ ಹಾಗೂ ರೈತರಿಗೆ ಎಲ್ಲ ಸೌಲಭ್ಯ ನೀಡಿದರೆ ಸೋಮಾರಿಗಳಾಗುತ್ತಾರೆ. ಹೀಗಾಗಿ ಅವರನ್ನು ಸದಾ ಅಭದ್ರತೆ ಇಡಬೇಕೆಂಬ ಮಿಥ್ಯೆಯ ಮೂಲಕ ಕಾರ್ಮಿಕರ ಶ್ರಮಕ್ಕೆ ತಕ್ಕ ಸಂಬಳ ನೀಡದೆ ವಂಚಿಸಲಾಗುತ್ತಿದೆ. ಹೀಗಾಗಿ ಇಂತಹ ಮಿಥ್ಯೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂಂದ ಅರ್ಥ ಮಾಡಿಕೊಳ್ಳುವ ಮೂಲಕ ಬಂಡವಾಳಶಾಹಿ ತತ್ವ ಸಿದ್ಧಾಂತಗಳ ಚೌಕಟ್ಟಿನಿಂದ ಹೊರಬರಬೇಕು ಎಂದು  ಆಶಿಸಿದರು.

ಬಾರುಕೋಲು ಪಾಕ್ಷಿಕ ಪತ್ರಿಕೆಯ ಸಂಪಾದಕ ಬಿ.ಆರ್.ರಂಗಸ್ವಾಮಿ ಮಾತನಾಡಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಮಿಥ್ಯೆಗಳನ್ನು ಭಿತ್ತುವ ಮೂಲಕ ಜನತೆಯ ಆಲೋಚನಾ ಶಕ್ತಿಯನ್ನೇ ನಗಣ್ಯ ಮಾಡಲಾಗುತ್ತಿದೆ. ಇಂತಹ ಮಿಥ್ಯೆಗಳಲ್ಲಿರುವ ಜನವಿರೋಧಿ ಚಿಂತನೆಗಳ ಕುರಿತು ಜಾಗೃತಿ ಮೂಡಿಸುವುದು ತತ್ವ ಜ್ಞಾನಿಗಳ ಬಹುಮುಖ್ಯವಾದ ಜವಾಬ್ದಾರಿ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತೆ ಡಾ.ಆರ್.ಪೂರ್ಣಿಮಾ ವಹಿಸಿದ್ದರು.

ಉತ್ತರ ಪ್ರದೇಶದ ಸರಕಾರ ‘ತಾಜ್‌ ಮಹಲ್’ನ್ನು ಐತಿಹಾಸಿಕ ಪ್ರವಾಸಿ ತಾಣಗಳ ಪಟ್ಟಿಯಿಂದ ಕೈ ಬಿಟ್ಟಿದೆ. ಇದರ ಮುಂದಿನ ಬೆಳವಣಿಗೆ ಮುಸ್ಲಿಮ್, ದ್ರಾವಿಡ ಆಳ್ವಿಕೆಯ ಕಾಲಘಟ್ಟಗಳನ್ನು ನಗಣ್ಯ ಮಾಡುವುದೇ ಆಗಿದೆ. ಒಟ್ಟಾರೆ ಸಂಶೋಧನೆ ಕ್ಷೇತ್ರವನ್ನು ಅಧಃಪತನ ಗೊಳಿಸುವ ಕಾರ್ಯ ಪ್ರಭುತ್ವಗಳೇ ಮಾಡುತ್ತಿರುವುದು ಆತಂಕ ಮೂಡಿಸುವ ವಿಷಯ.

-ಡಾ.ಜಿ.ರಾಮಕೃಷ್ಣ  ಸಂಸ್ಕೃತಿ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News