ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಜವಾಬ್ದಾರಿಯಿಂದ ಕೆಲಸ ಮಾಡಿ: ದೇವೇಗೌಡ
ಬೆಂಗಳೂರು, ಅ. 8: ಬೆಂಗಳೂರು ನಗರದಲ್ಲಿ ನಮ್ಮ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ದೃಷ್ಟಿಯಿಂದ ಬೂತ್ ಕಮಿಟಿ ಸದಸ್ಯರು ಮತ್ತು ಅಭ್ಯರ್ಥಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜೆಡಿಎಸ್ ರಾಷ್ಟ್ರೀಯಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಲಹೆ ನೀಡಿದ್ದಾರೆ.
ರವಿವಾರ ಇಲ್ಲಿನ ಪದ್ಮನಾಭನಗರ ಕ್ಷೇತ್ರದಲ್ಲಿ ಪಕ್ಷದಿಂದ ಏರ್ಪಡಿಸಿದ್ದ ಬೂತ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಪಕ್ಷ ಗೆದ್ದರೆ, ಕ್ಷೇತ್ರ ಗೆದ್ದಂತೆ. ಹೀಗಾಗಿ ಕಮಿಟಿ ಸದಸ್ಯರು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ನಾನು ಈಗಾಗಲೇ ಜೆಡಿಎಸ್ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದೇನೆ. ಆದರೆ, ಇಂದಿಗೂ ನಮ್ಮ ಪಕ್ಷದಿಂದ ಸ್ಪರ್ಧಿಸಲು ಹಲವು ಆಕ್ಷಾಂಕ್ಷಿಗಳಿದ್ದಾರೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬುದು ಅನೇಕ ಮುಖಂಡರು ಹಾಗೂ ರಾಜ್ಯದ ಜನತೆಯ ಆಶಯ ಎಂದು ತಿಳಿಸಿದರು.
ನಾನು ಸಚಿವನಾಗಿ, ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ಕುಮಾರಸ್ವಾಮಿ ಈ ಹಿಂದೆ 20ತಿಂಗಳ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತರು ಹಾಗೂ ಮುಖಂಡರು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದರು.
ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕು. ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಅಲ್ಲಿನ ಕಾರ್ಯಕರ್ತರು ಪ್ರತಿದಿನ ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು. ಹಿಂದೆ ನಾವು ಮಾಡಿರುವ ಸಾಧನೆ ಹಾಗೂ ಎರಡು ರಾಷ್ಟ್ರೀಯ ಪಕ್ಷಗಳ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು. ಬೆಂಗಳೂರಿನ ಜವಾಬ್ದಾರಿಯನ್ನು ರಾಜ್ಯಸಭಾ ಸದಸ್ಯ ಕುಪೆಂದ್ರ ರೆಡ್ಡಿ ಸೇರಿದಂತೆ ಐದು ಜನರಿಗೆ ನೀಡಲಾಗಿದೆ ಎಂದರು.
ಬಿಬಿಎಂಪಿಯಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಪಾಲಿಕೆಯಲ್ಲಿ ನಾವೂ ಪಾಲುದಾರರಾಗಿರುವುದರಿಂದ ಜನರ ಎದುರು ತಲೆಬಾಗುವಂತಾಯಿತು ಎಂದ ಅವರು, ಮುಂಬರುವ ದಿನಗಳಲ್ಲಿ ಹೀಗೆ ಆಗದಂತೆ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯರು ಎಚ್ಚರಿಕೆ ವಹಿಸಬೇಕು. ಜೆಡಿಎಸ್ ಮುಖಂಡ ಗೋಪಾಲ್ ಅವರನ್ನು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಲು ಕೆಲವರು ಸಲಹೆ ನೀಡಿದ್ದಾರೆ. ಆದರೆ, ಯಾರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೂ ನಮ್ಮಲ್ಲಿ ಐಕ್ಯತೆ ಇದ್ದರೆ ಮಾತ್ರ ಅವರು ಗೆಲ್ಲಲು ಸಾಧ್ಯ ಎಂದು ದೇವೇಗೌಡ ತಿಳಿಸಿದರು.