×
Ad

ಅನಧಿಕೃತ ಕಸಾಯಿಖಾನೆ ಮುಚ್ಚಿಸಲು ಬಿಜೆಪಿ ಆಗ್ರಹ

Update: 2017-10-08 19:22 IST

ಬೆಂಗಳೂರು, ಅ. 8: ರಾಜ್ಯದಲ್ಲಿನ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿಸಬೇಕು. ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಟ ಕಾರ್ಯಕರ್ತರು ನಗರದ ಆನಂದ ರಾವ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ರವಿವಾರ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯದಲ್ಲಿ ಗೋಹತ್ಯೆ ಮಾಡುವ ಕಸಾಯಿಖಾನೆಗಳಿದ್ದರೂ ರಾಜ್ಯ ಸರಕಾರ, ಹೈಕೋರ್ಟ್‌ಗೆ ತಪ್ಪು ಮಾಹಿತಿ ನೀಡುವ ಮೂಲಕ ಗೋಹತ್ಯೆಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ದೂರಿದರು.

ಕಸಾಯಿಖಾನೆ ತೆರವುಗೊಳಿಸಿ ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ, ರಾಜ್ಯ ಸರಕಾರ ಅರ್ಟಾನಿ ಜನರಲ್ ಮೂಲಕ ರಾಜ್ಯದಲ್ಲಿ ಗೋಹತ್ಯೆ ಕಸಾಯಿಖಾನೆಗಳಿಲ್ಲ ಎಂಬ ಸುಳ್ಳು ಮಾಹಿತಿ ನೀಡಿದೆ. ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಗೋ ಕಳ್ಳರಿಗೆ ಪುರಸ್ಕಾರ ದೊರೆಯುವಂತೆ ಆಗಿದೆ ಎಂದು ಟೀಕಿಸಿದರು.

ಮಾಂಸ ತಿನ್ನುವ ಚಪಲವಿದ್ದರೆ ಗೋವನ್ನು ಹೊರತುಪಡಿಸಿ ಬೇರೆ ಪ್ರಾಣಿಗಳ ಮಾಂಸ ಭಕ್ಷಿಸಲಿ. ಅದು ಬಿಟ್ಟು ಸಂಸ್ಕೃತಿಯ ಮೂಲ ಆಗಿರುವ ಗೋ ಮಾಂಸ ಸೇವನೆ ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಗೋವಿನ ಹಾಲು ಸರ್ವಜನಾಂಗಕ್ಕೂ ಅಗತ್ಯ ಎಂದರು.

ಗೋಮಾಂಸ ಸೇವಿಸುವವರು ಹೆಚ್ಚು ವರ್ಷಗಳ ಕಾಲ ಬದುಕಿರುವುದಿಲ್ಲ. ಇದಕ್ಕೆ ಪೂರಕ ಎಂಬಂತೆ ಎಲ್ಲ ಆಸ್ಪತ್ರೆಗಳಲ್ಲಿ ಮುಂದೆ ದೊಡ್ಡ ಸರದಿಯೇ ಇರುತ್ತಾರೆ. ಇದನ್ನು ವ್ಯಂಗ್ಯವಾಗಿ ಹೇಳುತ್ತಿಲ್ಲ. ಬೇಕಾದರೆ ಒಮ್ಮೆ ಪರೀಕ್ಷಿಸಿ. ಗೋಮಾಂಸ ತಿನ್ನುವವರು ಹೆಚ್ಚುದಿನ ಬದುಕುವುದಿಲ್ಲ ಎಂದು ನುಡಿದರು.

ಧರಣಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಮಾ.ನಾಗರಾಜ್, ಪ್ರಕೋಷ್ಟ ಸಂಚಾಲಕ ಸಿದ್ಧಾರ್ಥ ಗೊಯೆಂಕಾ, ಮುಖಂಡ ಶಿವಕುಮಾರ್ ಸೇರಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News