×
Ad

ಬಿಎಸ್ ವೈ-ಅನಂತಕುಮಾರ್ ಸಂಭಾಷಣೆ ಅಸಲಿ: ಎಫ್‌ಎಸ್‌ಎಲ್ ವರದಿ

Update: 2017-10-08 19:38 IST

ಬೆಂಗಳೂರು, ಅ.8: ಹೈಕಮಾಂಡ್‌ಗೆ ಕಪ್ಪ ನೀಡಿದ ಆರೋಪ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ ನಡೆಸಿರುವ ಸಂಭಾಷಣೆ ಅಸಲಿ ಎಂದು ಎಫ್‌ಎಸ್‌ಎಲ್ ವರದಿ ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪ, ಅನಂತಕುಮಾರ್ ಹೈಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಸಿರುವ ಬಗ್ಗೆ ನಡೆಸಿರುವ ಸಂಭಾಷಣೆ ಸಿಡಿ ಮೂಲಕ ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಬಳಿಕ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಿಡಿಯ ಸಂಭಾಷಣೆ ಧ್ವನಿ ಸಂಬಂಧ ದೂರು ದಾಖಲಾಗಿತ್ತು ಎಂದು ತಿಳಿದು ಬಂದಿದೆ.

ಅ.4 ರಂದು ಸೈಬರ್ ಕ್ರೈಂ ಪೊಲೀಸರಿಗೆ ಫಾರೆನ್ಸಿಕ್ ವಿಭಾಗದ(ಎಫ್‌ಎಸ್‌ಎಲ್) ಸಹಾಯಕ ನಿರ್ದೇಶಕಿ ಸಿ.ಶ್ರೀವಿದ್ಯಾ ವರದಿಯೊಂದನ್ನು ಸಲ್ಲಿಸಿದ್ದು, ಇದರಲ್ಲಿ ಯಡಿಯೂರಪ್ಪ-ಅನಂತಕುಮಾರ್ ನಡೆಸಿರುವ ಸಂಭಾಷಣೆ ಅಸಲಿಯಾಗಿದ್ದು, ಈ ಸಂಬಂಧ ಭ್ರಷ್ಟಚಾರ ನಿಗ್ರಹ ದಳ(ಎಸಿಬಿ) ಎಫ್‌ಐಆರ್ ದಾಖಲಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ದೂರು: ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ತಮ್ಮ ಪಕ್ಷದ ಹೈಕಮಾಂಡ್‌ಗೆ ಲಂಚ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕೆಂದು ಕೆಪಿಸಿಸಿ ಕಾನೂನು ಘಟಕ ಎಸಿಬಿಗೆ ದೂರು ನೀಡಿತ್ತು.

ಏನು ಸಂಭಾಷಣೆ: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಳೆದ ಫೆ.12ರಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭಾಷಣ ಮಾಡುತ್ತಿರುವ ವೇಳೆ ರಾಜ್ಯಾಧ್ಯಕ್ಷ ಯಡಿಯೂರಪ್ಪಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ನಡುವೆ ನಡೆದಿರುವ ಸಂಭಾಷಣೆ. ಈ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಕಪ್ಪನೀಡಿರುವ ವಿಚಾರವನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾದ ಸಿಡಿಯನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆಗೊಳಿಸಿದ್ದರು.

‘ಬಿಎಸ್‌ವೈ-ಅನಂತಕುಮಾರ್ ನಡುವಿನ ಮಾತುಕತೆ’

ಅನಂತಕುಮಾರ್: ಅವರೂ ಕೊಟ್ಟಿದ್ದಾರೆ. ನಾನೂ.. ಕೊಟ್ಟಿದ್ದೀನಿ.. ಅಂದ ಹಾಗೆ ಆಯ್ತು...ಮುಖ್ಯಮಂತ್ರಿದು.
ಯಡಿಯೂರಪ್ಪ: ನಗು,
ಅನಂತಕುಮಾರ್: ‘ನೀವು(ಯಡಿಯೂರಪ್ಪ) ಹೈಕಮಾಂಡ್‌ಗೆ ಕೊಟ್ಟಿದ್ದೀರಿ, ನಾನೂ ಕೊಟ್ಟಿದ್ದೀನಿ... ಆದರೆ, ಸಾವಿರ ಕೋಟಿ ಎಲ್ಲ ಕೊಟ್ಟಿಲ್ಲ ಅಂತೆ(ಇಬ್ಬರೂ ಜೋರಾಗಿ ನಗು).

ನೀವು ಆಗ ಕೊಟ್ಟಿದ್ರಲ್ಲ, ಅದಕ್ಕೆ ಇವರೂ ಕೊಡ್ತಾ ಇದ್ದಾರಂತೆ.
ಅನಂತಕುಮಾರ್: ಅಂದ್ರೆ ಕೊಟ್ಟಿರೋದನ್ನು ಒಪ್ಪಿಕೊಂಡಂತಾಯಿತಲ್ಲ.
ಯಡಿಯೂರಪ್ಪ: ಆದರೆ, ಕೊಟ್ಟಿರೋದನ್ನು ಯಾರಾದರೂ ಬರೆದುಕೊಂಡಿರುತ್ತಾರಾ...
ಅನಂತಕುಮಾರ್: ಮತ್ತೆ ನಗು


‘ಇಬ್ಬರ ವಿರುದ್ಧ ಎಫ್‌ಐಆರ್‌ಗೆ ಸಿದ್ಧತೆ’
ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡಿದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ- ಕೇಂದ್ರ ಸಚಿವ ಅನಂತಕುಮಾರ್ ನಡೆಸಿರುವ ಸಂಭಾಷಣೆ ಅಸಲಿ ಎಂದು ಎಫ್‌ಎಸ್‌ಎಲ್ ವರದಿ ನೀಡಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಪ್ರಕಾರ ಎಫ್‌ಐಆರ್ ದಾಖಲಿಸಲು ಎಸಿಬಿ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.


ನನ್ನ ವಿರುದ್ಧ ಒಂದಲ್ಲ, ನೂರು ಎಫ್‌ಐಆರ್ ಹಾಕಿದರು ಹೆದರುವುದಿಲ್ಲ. ವಿನಾಶಕಾಲೆ ವಿಪರೀತ ಬುದ್ಧಿ ಅನ್ನೋ ರೀತಿ ಸರಕಾರ ವರ್ತಿಸುತ್ತಿದೆ. ಎಸಿಬಿಯನ್ನು ತಮಗೆ ಬೇಕಾದಂತೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News