ಬೆಂಗಳೂರು: ರಸ್ತೆ ಗುಂಡಿಗೆ ಮಹಿಳೆ ಬಲಿ
ಬೆಂಗಳೂರು, ಅ.8: ನಗರದ ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಯೋರ್ವರು ರಸ್ತೆ ಗುಂಡಿಯಿಂದಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಸಂಚಾರ ಠಾಣೆ ವ್ಯಾಪ್ತಿ ನಡೆದಿದೆ.
ರವಿವಾರ ನಾಯಂಡನಹಳ್ಳಿ ಸಿಗ್ನಲ್ ಬಳಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ರಾಧಾ (34) ಎಂಬಾಕೆ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ರಾಧಾ ಅವರು ಅಳಿಯ ರವಿಕುಮಾರ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೈಕ್ ಕೆಳಗೆ ಬಿದ್ದಿದ್ದು, ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ರಾಧಾ ಅವರ ಮೇಲೆ ಹರಿದ ಪರಿಣಾಮ ರಾಧಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ರವಿಕುಮಾರ್ ಅವರು ಪಾರಾಗಿದ್ದಾರೆ. ಘಟನೆ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಬ್ಯಾಟರಾಯನಪುರ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದರು. ಘಟನೆ ನಡೆದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಿಬಿಎಂಪಿ ವಿರುದ್ಧ ಕಿಡಿ: ಘಟನೆ ಸಂಬಂಧ ಸ್ಥಳಕ್ಕೆ ಬಂದ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳು ಅಪಘಾತ ನಡೆದ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರಲ್ಲದೆ, ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರಸ್ತೆಗಳೆಲ್ಲಾ ಗುಂಡಿಗಳಾಗಿವೆ. ಇಷ್ಟಾದರೂ ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಕಿಡಿಕಾರಿದರು.
ಕಳೆದ ವಾರವಷ್ಟೇ ಮೈಸೂರು ರಸ್ತೆ ಫ್ಲೈ ಓವರ್ ಮೇಲೆ ರಸ್ತೆ ಗುಂಡಿಯಿಂದ ಅಪಘಾತವಾಗಿ ದಂಪತಿ ಮೃತಪಟ್ಟಿದ್ದರು. ಈಗ ಮತ್ತೆ ಅಂತಹದೆ ಘಟನೆ ನಡೆದು ರಸ್ತೆ ಗುಂಡಿಯಿಂದಾಗಿ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ’
ಘಟನೆ ಸಂಬಂಧ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಗೆ ಭೇಟಿ ರಾಧಾ ಕುಟುಂಬದವರಿಗೆ ಸಾಂತ್ವನ ಹೇಳಿದರು.ಈ ವೇಳೆ ಮಾತನಾಡಿದ ಮೇಯರ್, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಪ್ರಕಟಿಸಿದರು. ಅಲ್ಲದೆ, ಮಳೆ ನಿಂತ ಕೂಡಲೇ ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭವಾಗಲಿದೆ. ಸದ್ಯಕ್ಕೆ ಗುಂಡಿ ಮುಚ್ಚಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ನೇತ್ರದಾನ
‘ರಾಧಾ ಅವರ ಕಣ್ಣುಗಳನ್ನು ಅವರ ಕುಟುಂಬಸ್ಥರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ’.