ಜೆ.ಎಚ್.ಪಟೇಲ್ ಚಿಂತನೆ ಯುವ ಪ್ರತಿನಿಧಿಗಳಿಗೆ ಪ್ರೇರಣೆ: ಮುಕುಂದರಾಜ್
ಬೆಂಗಳೂರು, ಅ.8: ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸಮಾಜವಾದಿ ಚಿಂತನೆಗಳ ಮೂಲಕ ರಾಜ್ಯವನ್ನಾಳಿದ ಅಪರೂಪದ ನಾಯಕರಾಗಿದ್ದಾರೆ. ಅವರ ತತ್ವ ಚಿಂತನೆಗಳು ಯುವ ಜನಪ್ರತಿನಿಧಿಗಳಿಗೆ ಪ್ರೇರಣೆಯಾಗಲಿ ಎಂದು ಹಿರಿಯ ವಿಮರ್ಶಕ ಎಲ್.ಎನ್.ಮುಕುಂದರಾಜ್ ಆಶಿಸಿದ್ದಾರೆ.
ರವಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ‘ಜೆ.ಎಚ್.ಪಟೇಲ್ ಸ್ಮರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮಾಜವಾದಿ ಬೇರುಗಳನ್ನು ನೆಟ್ಟ ನಾಯಕರಲ್ಲಿ ಜೆ.ಎಚ್.ಪಟೇಲ್ ಪ್ರಮುಖರೆಂದು ಸ್ಮರಿಸಿದರು.
ಸಮಾಜಿವಾದಿ ಚಿಂತನೆಯ ಹರಿಕಾರ ಲೋಹಿಯಾರವರ ಪ್ರೇರಣೆಯಿಂದ ಜಾರ್ಜ್ ಫೆರ್ನಾಂಡಿಸ್, ಜೆ.ಎಚ್.ಪಟೇಲ್ ಸೇರಿದಂತೆ ಹಲವು ಸಮಾಜವಾದಿ ನಾಯಕರು ರಾಜ್ಯದಲ್ಲಿ ಭೂ ಹೋರಾಟವನ್ನು ನಡೆಸಿ, ಲಕ್ಷಾಂತರ ಎಕರೆಯನ್ನು ಭೂ ಹೀನರಿಗೆ ಹಂಚುವಲ್ಲಿ ಯಶಸ್ವಿಯಾದರು. ಅವರ ಹೋರಾಟದ ಸ್ಫೂರ್ತಿ ಇಂದಿನ ಜನಪರ ಸಂಘಟನೆಗಳಿಗೆ ಮಾದರಿಯಾಗಲಿ ಎಂದು ಆಶಿಸಿದರು.
ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಪುತ್ರ ತ್ರಿಶೂಲ್ ಪಾಲಿ ಪಟೇಲ್ ಮಾತನಾಡಿ, ತನ್ನ ತಂದೆ ಜೆ.ಎಚ್.ಪಾಟೀಲ್ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲು ವಾಸ ಅನುಭವಿಸಿದ್ದರು. ಅವರ ಹೋರಾಟದ ಬದುಕು ಕೊನೆಗಾಲದವರೆಗೂ ಬತ್ತಿರಲಿಲ್ಲ. ತಮ್ಮ ರಾಜಕೀಯ ಅಧಿಕಾರವನ್ನು ಕುಟುಂಬದ ಸ್ವಾರ್ಥಕ್ಕಾಗಿ ಎಂದಿಗೂ ಬಳಸಿಕೊಂಡವರಲ್ಲವೆಂದು ತಿಳಿಸಿದರು.
ಪ್ರಮಾಣಿಕವಾಗಿ ಕೆಲಸ ಮಾಡುವವರು ಹೆಚ್ಚು ಮಾತನಾಡುವವರಲ್ಲ. ತಾವು ಮಾಡುವ ಕೆಲಸಗಳ ಕುರಿತು ಜನತೆ ಮಾತನಾಡುವಂತಾಗಬೇಕು. ಆ ರೀತಿಯಲ್ಲಿ ವಚನಕಾರರ ತತ್ವದಂತೆ ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟವರು ನನ್ನ ತಂದೆ ಜೆ.ಎಚ್.ಪಟೇಲ್. ಅವರ ಹಾದಿಯಲ್ಲಿಯೇ ನಾವು ಬದುಕುತ್ತಿದ್ದೇವೆ ಎಂಬ ಹೆಮ್ಮೆ ನಮಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಕಾರ್ಯಕರ್ತ ಎಸ್.ಮಹಾದೇವಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್ ಪಟೇಲ್, ರಂಗಕರ್ಮಿ ಕೆ.ವಿ.ನಾಗರಾಜಯ್ಯ ಮತ್ತಿತರರಿದ್ದರು.