ಕೆಸಿಎಫ್: ಹಜ್ ಸ್ವಯಂ ಸೇವಕರಿಗೆ ಅಭಿನಂದನಾ ಸಮಾರಂಭ

Update: 2017-10-09 09:39 GMT

ರಿಯಾದ್, ಅ. 9: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಘಟಕದ ಆಶ್ರಯದಲ್ಲಿ ಸಂಘಟನೆಯ ಸೌದಿ ರಾಷ್ಟ್ರೀಯ ಸಮಿತಿ ವತಿಯಿಂದ ಈ ಬಾರಿಯ ಹಜ್ಜ್ ಸೇವೆಗಾಗಿ ರೂಪಿಸಲಾದ ಎಚ್‌ವಿಸಿ ತಂಡಕ್ಕೆ ರಿಯಾದ್ ನಿಂದ ತೆರಳಿದ ಕಾರ್ಯಕರ್ತರಿಗಾಗಿ ಅಭಿನಂದನಾ ಸಮಾರಂಭವನ್ನು ಇತ್ತೀಚಿಗೆ ಏರ್ಪಡಿಸಲಾಗಿತ್ತು.

ಇಲ್ಲಿನ ಕ್ಲಾಸಿಕ್ ಹೊಟೆಲ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ವಿರಾಜಪೇಟೆ ಅನ್ವಾರುಲ್ ಹುದಾ ವಿದ್ಯಾ ಸಮುಚ್ಚಯದ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉದ್ಘಾಟಿಸಿದರು.

ಸಂಘಟನೆಯ ರಿಯಾದ್ ಝೋನ್ ಅಧ್ಯಕ್ಷ ಹನೀಫ್ ಬೆಳ್ಳಾರೆ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡಿದ್ದ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಮಾತನಾಡಿ, ಮಾನವ ಸಮಾಜದಲ್ಲಿ ದಿನದಿಂದ ದಿನಕ್ಕೆ ಬಿರುಕು, ಉದ್ವೇಗ, ಅಸಮಾನತೆ, ಬಾಂಧವ್ಯದ ಕೊರತೆ ಹಾಗೂ ಸ್ವಾರ್ಥದ ಕೆಟ್ಟ ಕಲ್ಪನೆಗಳು ಹೆಚ್ಚಳವಾಗುತ್ತಿದ್ದು ಇಂತಹ ದುರಾಲೋಚನೆಗಳನ್ನು ಅಳಿಸಿ ಹಾಕಿ ಸ್ವಾಸ್ಥ್ಯ ಪೂರ್ಣ ಸಮಾಜವೊಂದರ‌ ನಿರ್ಮಾಣದಲ್ಲಿ ಒಳಿತು ಹಾಗೂ ಸಂಸ್ಕೃತಿಯನ್ನು ಪ್ರತಿಪಾದಿಸುವ ಸಂಘಟನೆಗಳ ಪಾತ್ರ ಮಹತ್ತರವಾಗಿದ್ದು ಈ ದಿಸೆಯಲ್ಲಿ  ನಮ್ಮ ಕೆಸಿಎಫ್ ಮಾಡುತ್ತಿರುವ ಕೆಲಸಗಳನ್ನು ನಾಗರಿಕ ಸಮೂಹ ಗುರುತಿಸಿಕೊಂಡಿದೆ ಎಂದರು.

ಜೀವನದಲ್ಲಿ ನೈತಿಕ ಮೌಲ್ಯಗಳು ಹಾಗೂ ಧಾರ್ಮಿಕ ಶಿಷ್ಟಾಚಾರಗಳನ್ನು ಅಳವಡಿಸಿಕೊಂಡಾಗ ಆ ನಿಟ್ಟಿನಲ್ಲಿ ಬೆಳೆದು ಬರುವ ಜನಾಂಗವು ಇಡೀ ಮನು ಕುಲಕ್ಕೇ ಮಾದರಿಯಾಗಬಲ್ಲದು. ಪರಸ್ಪರ ಪ್ರೀತಿ, ವಿಶ್ವಾಸ, ಅನ್ಯೋನ್ಯತೆ ಮತ್ತು ಅಸಹಾಯಕರಿಗೆ ನೆರವಾಗುವ ಮನೋಧರ್ಮ ನಮ್ಮಲ್ಲಿ ಬೆಳೆದು ಬರಬೇಕು. ವಿಪರೀತ ಸನ್ನಿವೇಶಗಳಲ್ಲೂ  ಪ್ರವಾಹದ ವಿರುದ್ಧ ಈಜಾಡುವ ಹಾಗೂ ಸೈದ್ಧಾಂತಿಕ ಧೋರಣೆಗಳೊಂದಿಗೆ ರಾಜಿಮಾಡಿಕೊಳ್ಳದ ಕೆಚ್ಚೆದೆಯ ನಿರ್ಧಾರಗಳನ್ನು ನಾವು ಬೆಂಬಲಿಸಬೇಕು. ನ್ಯಾಯದ ಪರವಾಗಿನ ಹೋರಾಟದಲ್ಲಿ ಟೀಕೆ ಟಿಪ್ಪಣಿಗಳು, ವಿಮರ್ಷೆಗಳು ,ಅಸೂಯೆ ಇತ್ಯಾದಿ ಸರ್ವೇ ಸಾಮಾನ್ಯ. ಈ ಬೆಳವಣಿಗೆಗಳು ನಮ್ಮ ಸ್ಪೂರ್ತಿಯನ್ನು ಇಮ್ಮಡಿಗೊಳಿಸುವ ಸಾಧನವಾಗಬೇಕೇ ಹೊರತು ಯಾವ ಕಾರಣಕ್ಕೂ ನಮ್ಮನ್ನು ಸೋಲಿಸು ವಂತಾಗಬಾರದು ಎಂದು ಅವರು ಕಿವಿಮಾತು ಹೇಳಿದರು.

ಈ ಬಾರಿಯ ಹಜ್ಜ್ ಸೇವೆಗೆ ರಿಯಾದ್ ಝೋನ್ ಗೊಳಪಟ್ಟ ವಿವಿಧ ಸೆಕ್ಟರ್ ಗಳಿಂದ ಸ್ವಯಂಸೇವಕರಾಗಿ ತೆರಳಿದ ಸುಮಾರು 60 ಮಂದಿ ಕಾರ್ಯಕರ್ತರಿಗೆ ಈ ವೇಳೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಜೊತೆಗೆ ತಂಡದ ನಾಯಕನಾಗಿ ಆಯ್ಕೆಗೊಂಡು ತನ್ನ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುವ ಮೂಲಕ ಸರ್ವರಿಂದಲೂ ಶ್ಲಾಘನೆಗೆ ಒಳಗಾದ ಕೆಸಿಎಫ್ ರಿಯಾದ್ ಝೋನ್ ಮುಖಂಡ ಹಂಝ ಮೈಂದಾಳ ಇವರನ್ನು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಯೂಸುಫ್ ಸಖಾಫಿ ಹಾಗೂ ಪ್ರಾಂತೀಯ ಅಧ್ಯಕ್ಷ ಹನೀಫ್ ಬೆಳ್ಳಾರೆ ಸೇರಿ ಶಾಲು ಹೊದಿಸಿ ಸನ್ಮಾನಿಸಿದರರು.

ಅನಿವಾಸಿ ಜೀವನಕ್ಕೆ ವಿದಾಯ ಹೇಳಿ ತವರೂರಿಗೆ ತೆರಳುತ್ತಿರುವ ಕೆಸಿಎಫ್ ಶಿಕ್ಷಣ ವಿಭಾಗದ ಮಾಜಿ ಅಧ್ಯಕ್ಷ ಅಬ್ದುಲ್ಲಾ ಮದನಿ ಗುರುವಾಯನಕೆರೆ ಇವರಿಗೂ ವೇದಿಕೆಯಲ್ಲಿ  ವಿದಾಯ ಅರ್ಪಿಸಲಾಯಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ನಝೀರ್ ಕಾಶಿಪಟ್ಣ, ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ, ಕೆಸಿಎಫ್ ಶಿಫಾ ಸೆಕ್ಟರ್ ಅಧ್ಯಕ್ಷ ಯೂಸುಫ್ ಕಳಂಜಿಬೈಲ್, ಬದೀಯ ಸೆಕ್ಟರ್ ಅಧ್ಯಕ್ಷ ಉಮರ್ ಅಳಕೆಮಜಲು, ಓಲ್ಡ್ ಸನಯ್ಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ, ಮಲಾಝ್ ಘಟಕದ ಅಧ್ಯಕ್ಷ ಸಾದಾತ್ ಉಳ್ಳಾಲ್, ಒಲಯ್ಯಾ ಸೆಕ್ಟರ್ ನ ಮುಸ್ತಫಾ ಝೈನಿ ಕೊಡಗು, ಗೊರ್ನಾತ ಸೆಕ್ಟರ್ ನ ಸಿತಾರ್ ಮುಹಮ್ಮದ್ ಹಾಜಿ, ರಬ್ವಾ ಸೆಕ್ಟರ್ ಅಧ್ಯಕ್ಷ ಸಿರಾಜುದ್ದೀನ್ ವಳಾಲು, ರೌದ ಘಟಕದ ಅಬ್ದುಲ್ ಸಲಾಂ ಹಳೆಯಂಗಡಿ, ಬತ್ತಾ ಸೆಕ್ಟರ್ ಅಧ್ಯಕ್ಷ  ಇಲ್ಯಾಸ್ ಲತೀಫಿ  ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

2017 ರ ಸಾಲಿನ ಹಜ್ಜ್ ಸ್ವಯಂ ಸೇವೆಯ ಕೆಲವೊಂದು ಅಪೂರ್ವ ಕ್ಷಣಗಳನ್ನು ಸೆರೆಹಿಡಿದು ತಯಾರಿಸಲಾದ ಸಾಕ್ಷ್ಯ ಚಿತ್ರವನ್ನು ಈ ಸಂದರ್ಭ ಸಾರ್ವಜನಿಕರಿಗಾಗಿ ಪ್ರದರ್ಶಿಸಲಾಯಿತು.

ಬತ್ತಾ ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಲತೀಫಿ ಕಿರಾ ಅತ್ ಪಠಿಸಿದರು. ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಆರಂಭದಲ್ಲಿ ಸ್ವಾಗತಿಸಿದರು. ಹೈದರ್ ಮರ್ದಾಳ ಕಾರ್ಯಕ್ರಮ ನಿರೂಪಿಸಿದರು. ಸಿದ್ದೀಕ್ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News