ಸೌದಿ ಮಾರುಕಟ್ಟೆಯಲ್ಲಾದ ಬದಲಾವಣೆ ಏನು?

Update: 2017-10-10 15:58 GMT

ಬೆರೂತ್, ಅ. 10: ಸೌದಿ ಅರೇಬಿಯದಲ್ಲಿ ಮಹಿಳೆಯರುವ 2018ರ ಜೂನ್‌ನಿಂದ ವಾಹನ ಚಾಲನೆ ಮಾಡಬಹುದು ಎಂಬ ಆದೇಶ ಹೊರಬೀಳುತ್ತಿರುವಂತೆಯೇ, ಸೌದಿಮಾರುಕಟ್ಟೆಯಲ್ಲಿ ಹಲವಾರು ಬದಲಾವಣಿಗಳಾಗಿವೆ. ಉದ್ಯಮಗಳಲ್ಲಿ ಮಹಿಳೆಯರಿಗೆ ವ್ಯಾಪಕ ಅವಕಾಶಗಳು ದೊರಕುತ್ತಿವೆ.

 ಈ ಪೈಕಿ ಪ್ರಯಾಣ ಹಂಚಿಕೆ ಆ್ಯಪ್‌ಗಳು, ಕಾರು ತಯಾರಕರು ಮತ್ತು ವಾಹನ ಚಾಲನೆ ಕಲಿಸುವ ಶಾಲೆಗಳು ಮುಂಚೂಣಿಯಲ್ಲಿವೆ.

ಬಾಡಿಗೆಗೆ ವಾಹನಗಳನ್ನು ಒದಗಿಸುವ ಸಂಸ್ಥೆ ಉಬರ್‌ಗಾಗಿ ಕೆಲಸ ಮಾಡಲು ಬಯಸುವ ಸೌದಿ ಮಹಿಳೆಯರಿಗೆ ಚಾಲನೆ ಕಲಿಸುವುದಕ್ಕಾಗಿ ವರ್ಷದ ಒಳಗೆ ಮಹಿಳಾ ಚಾಲನೆ ತರಬೇತಿದಾರರನ್ನು ನೇಮಿಸಲಾಗುವುದು ಎಂದು ಅದು ಹೇಳಿದೆ.

ಚಾಲಕಿಯರಿಗೆ ನೆರವು ನೀಡುವುದಕ್ಕಾಗಿ ಪ್ರಥಮ ‘ಮಹಿಳಾ ಪಾಲುದಾರ ಬೆಂಬಲ ಕೇಂದ್ರ’ವೊಂದನ್ನು ಸ್ಥಾಪಿಸುವುದಕ್ಕಾಗಿ ಕಂಪೆನಿ ಹೇಳಿದೆ.

ಮಹಿಳೆಯರ ವಾಹನ ಚಾಲನೆ ನಿಷೇಧ 2018ರ ಜೂನ್‌ನಲ್ಲಿ ತೆರವುಗೊಳ್ಳುತ್ತದೆ ಎಂಬುದಾಗಿ ಸೆಪ್ಟಂಬರ್ 26ರಂದು ಸೌದಿ ದೊರೆ ಸಲ್ಮಾನ್ ಹೊರಡಿಸಿದ ಆದೇಶವೊಂದು ತಿಳಿಸಿದೆ.

 ಮಹಿಳೆಯರಿಗಾಗಿ ತಾನೊಂದು ವಾಹನ ಚಾಲನಾ ಶಾಲೆಯೊಂದನ್ನು ತೆರೆಯುವುದಾಗಿ ರಿಯಾದ್‌ನಲ್ಲಿರುವ ಸರ್ವ ಮಹಿಳಾ ರಾಜಕುಮಾರಿ ನೂರಾ ಬಿಂತ್ ಅಬ್ದುಲ್‌ರಹಮಾನ್ ವಿಶ್ವವಿದ್ಯಾನಿಲಯ ಟ್ವಿಟರ್‌ನಲ್ಲಿ ಘೋಷಿಸಿದೆ. ಇದು ಇಂಥ ಪ್ರಥಮ ವಾಹನ ಚಾಲನಾ ಶಾಲೆಯಾಗಿದೆ.

ನಿಸಾನ್, ಬಿಎಂಡಬ್ಲು ಮುಂತಾದ ಕಾರು ತಯಾರಿಕಾ ಕಂಪೆನಿಗಳೂ ಮಹಿಳಾ ವಾಹನ ಚಾಲನೆಯನ್ನು ಸ್ವಾಗತಿಸಿವೆ.

‘‘ಇನ್ನು ವಾಹನ ಚಾಲನೆ ಮಾಡುವ ಎಲ್ಲ ಮಹಿಳೆಯರಿಗೂ ಅಭಿನಂದನೆಗಳು’’ ಎಂದು ನಿಸಾನ್ ಹೇಳಿದೆ.

ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ಲಭಿಸುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯದಲ್ಲಿ ಇನ್ನು ಕಾರುಗಳ ಮಾರಾಟ ವಾರ್ಷಿಕ 15-20 ಶೇಕಡದಷ್ಟು ಹೆಚ್ಚಳವಾಗಬಹುದು ಎಂದು ಊಹಿಸಲಾಗಿದೆ.

ಆದಾಗ್ಯೂ, ಸೌದಿ ಅರೇಬಿಯದ ನೂತನ ಆದೇಶವು ಈಗಾಗಲೇ ಆ ದೇಶದಲ್ಲಿ ಮನೆಗಳಲ್ಲಿ ಚಾಲಕರಾಗಿ ದುಡಿಯುತ್ತಿರುವ ಸುಮಾರು 13 ಲಕ್ಷ ಪುರುಷರಿಗೆ ದುಃಸ್ವಪ್ನವಾಗಿ ಕಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News