ವಿವಾದಿತ ಹೇಳಿಕೆ ಆರೋಪ: ಕುಲಪತಿ ಮಲ್ಲಿಕಾ ಘಂಟಿಗೆ ಹೈಕೋರ್ಟ್ ತರಾಟೆ
ಬೆಂಗಳೂರು, ಅ.10: ರಾಮಾಯಣ ಹಾಗೂ ಮಹಾಭಾರತ ಅತ್ಯಾಚಾರದ ಕೂಪಗಳು. ಅವುಗಳನ್ನು ಓದುತ್ತಾ ಬೆಳದವರಲ್ಲಿ ಹಿಂಸಾಪ್ರವೃತ್ತಿ ಹೆಚ್ಚಿರುತ್ತದೆ ಎಂದು ಎರಡು ವರ್ಷಗಳ ಹಿಂದೆ ಹೇಳಿಕೆ ನೀಡಿದ್ದ ಕುವೆಂಪು ವಿಶ್ವವಿದ್ಯಾನಿಲಯದ ಹಾಲಿ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರನ್ನು ಹೈಕೋರ್ಟ್ ಬುಧವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಮಲ್ಲಿಕಾ ಘಂಟಿ ಅವರು ಉನ್ನತ ಹುದ್ದೆಯಲ್ಲಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಕಡಿಮೆ ಮಾತನಾಡಬೇಕು. ಒಂದೊಮ್ಮೆ ಮಾತನಾಡಿದರೂ ಜವಾಬ್ದಾರಿಯಿಂದ ನುಡಿಯಬೇಕಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶವಿರುತ್ತದೆ. ಆದರೆ, ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ ಎಂದೇಳಿ ಬೇರೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತೆ ಹೇಳಿಕೆ ನೀಡಬಾರದು. ಅದರಲ್ಲೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುವಾಗ ಎಚ್ಚರದಿಂದ ಇರಬೇಕು. ಸಮಾಜದ ಸಾಮರಸ್ಯಕ್ಕೆ ಪೆಟ್ಟು ಬೀಳುವಂತ ಹೇಳಿಕೆ ನೀಡಬಾರದು ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು ತೀಕ್ಷ್ಣವಾಗಿ ನುಡಿದರು.
ಅಲ್ಲದೆ, ಮಲ್ಲಿಕಾ ಘಂಟಿ ಬಳಸಿದ ಪದಗಳನ್ನು ನೋಡಿದರೆ ಆಶ್ವರ್ಯವಾಗುತ್ತದೆ. ರಾಮಾಯಣ ಹಾಗೂ ಮಹಾಭಾರತ ಅತ್ಯಾಚಾರದ ಕೂಪಗಳು, ಅವುಗಳನ್ನು ಓದುತ್ತಾ ಬೆಳೆದವರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಿರುತ್ತದೆ ಅಂದರೆ ಏನರ್ಥ? ರಾಮಾಯಣ ಮತ್ತು ಮಹಾಭಾರತ ಓದಿದವರೆಲ್ಲಾ ದೌರ್ಜನ್ಯ ಎಸಗುತ್ತಾರೆಯೇ? ಅವರು ದೋಷಿಗಳೇ? ಇಂತಹ ಮಾತುಗಳನ್ನು ಆಡುವುದು ಸರಿಯಲ್ಲ. ಪ್ರತಿಯೊಬ್ಬರೂ ಸಹ ಬೇರೊಬ್ಬರ ಅಭಿಪ್ರಾಯಗಳನ್ನು ಗೌರವಿಸಬೇಕಾಗುತ್ತದೆ ಎಂದು ವಿಚಾರಣೆ ವೇಳೆ ಸರಕಾರಿ ಅಭಿಯೋಜಕರನ್ನು ಉದ್ದೇಶಿಸಿ ಕಟುವಾಗಿ ನುಡಿದರು.
ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ 2014ರ ಜುಲೈ 28ರಂದು ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವೆಯಾಗಿದ್ದ ಡಾ.ಮಲ್ಲಿಕಾ ಘಂಟಿ ಅವರು, ‘ರಾಮಾಯಣ ಹಾಗೂ ಮಹಾಭಾರತ ಅತ್ಯಾಚಾರದ ಕೂಪಗಳು, ಅವುಗಳನ್ನು ಓದುತ್ತಾ ಬೆಳೆದವರಲ್ಲಿ ಹಿಂಸಾಪ್ರವೃತ್ತಿ ಹೆಚ್ಚಿರುತ್ತದೆ’ ಎಂದು ಹೇಳಿಕೆ ನೀಡಿದ್ದರು. ಸದ್ಯ ಅವರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ. ಅಂದು ಅವರ ಈ ಹೇಳಿಕೆ ಖಂಡಿಸಿ ಸುದ್ದಿ ವಾಹಿನಿಯೊಂದಕ್ಕೆ ಶಂಕರ್ ಬಿ. ಗೌಡ ಎಂಬವರು ಹೇಳಿಕೆ ನೀಡಿದ್ದರು.
ಇದರಿಂದ ಶಂಕರ್ ಗೌಡ ತಮ್ಮ ವಿರುದ್ಧ ಅತ್ಯಂತ ಅಸಹ್ಯಕರ ಹಾಗೂ ಅಸಭ್ಯವಾದ ಪದಗಳನ್ನು ಬಳಸಿ ನನ್ನ ಘನತೆ ಹಾಗೂ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಭದ್ರಾವತಿ ಠಾಣೆಗೆ ಮಲ್ಲಿಕಾ ಘಂಟಿ ದೂರು ನೀಡಿದ್ದರು.
ಈ ದೂರಿನ ತನಿಖೆ ನಡೆಸಿದ್ದ ಪೊಲೀಸರು, ಶಂಕರ್ ಗೌಡ ವಿರುದ್ಧ ಐಟಿ ಕಾಯ್ದೆ ಸೆಕ್ಷನ್ 66ಎ, 354ಎ, 504, 506 ಮತ್ತು ಐಪಿಸಿ 34ರಡಿ ಭದ್ರಾವತಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ದೋಷಾರೋಪ ರದ್ದುಕೋರಿ ಶಂಕರ್ ಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಆ ಅರ್ಜಿ ವಿಚಾರಣೆ ನಡೆಸಿದ ನಾಯಮೂರ್ತಿಗಳು, ಅರ್ಜಿದಾರನ ವಿರುದ್ಧದ ಅಧೀನ ನ್ಯಾಯಲಯದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದರು. ಜತೆಗೆ, ಡಾ.ಮಲ್ಲಿಕಾ ಘಂಟಿ ಮತ್ತು ಭದ್ರಾವತಿ ಠಾಣಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದರು. ಅಧೀನ ನ್ಯಾಯಾಲಯದ ವಿಚಾರಣೆ ತಡೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಸರಕಾರಿ ವಕೀಲರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು ಮೇಲಿನಂತೆ ಅಸಮಾಧಾನ ವ್ಯಕ್ತಪಡಿಸಿದರು.
ಅರ್ಜಿದಾರರ ಪರ ವಕೀಲ ಭರತ್ ಎಸ್. ರಾವ್ ವಾದ ಮಂಡಿಸಿದರು.