×
Ad

ಕಚೇರಿಗಳಲ್ಲಿ ಗಾಂಧಿ ಬದಲಿಗೆ ದೀನದಯಾಳ್ ಭಾವಚಿತ್ರವೇ ಪ್ರಧಾನಿ ಮೋದಿ ಕೊಡುಗೆ: ದೇವೇಗೌಡ

Update: 2017-10-11 21:16 IST

ಬೆಂಗಳೂರು, ಅ.11: ಮೋದಿ ಪ್ರಧಾನಿ ಆದ ಬಳಿಕ ಕೇಂದ್ರ ಸರಕಾರದ ಬಹುತೇಕ ಕಚೇರಿಗಳಲ್ಲಿ ಕಚೇರಿಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳು ಮರೆಯಾಗುತ್ತಿದ್ದು, ಈ ಸ್ಥಳಕ್ಕೆ ದೀನದಯಾಳ್ ಉಪಾದ್ಯಾಯ ಭಾವಚಿತ್ರಗಳು ಆವರಿಸಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಆಯೋಜಿಸಿದ್ದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 115ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರದ ಕಚೇರಿಗಳಲ್ಲಿ ಲೋಕನಾಯಕ ಜಯಪ್ರಕಾಶ್ ಅವರ ಭಾವಚಿತ್ರಗಳು ಇರಬೇಕಿತ್ತು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬಹುತೇಕ ಕಚೇರಿಗಳಲ್ಲಿ ಗಾಂಧೀಜಿ ಭಾವಚಿತ್ರಗಳು ಕಾಣುತ್ತಿಲ್ಲ. ಗಾಂಧೀಜಿ ಸ್ಥಳದಲ್ಲಿ ದೀನದಯಾಳ್ ಅವರ ಭಾವಚಿತ್ರಗಳು ತಲೆ ಎತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಜನತಾ ಸರಕಾರ ಇದ್ದಾಗ, ಬಳಿಕವೂ ಜಯಪ್ರಕಾಶ್ ಅವರ ಜನ್ಮದಿನಾಚರಣೆ ಆಚರಿಸಿಕೊಂಡೇ ಬಂದಿದ್ದೇವೆ. ಬಿಜೆಪಿಗೆ ಆಗಲಿ ಕಾಂಗ್ರೆಸ್ಸಿಗರಿಗಾಗಲಿ ಜಯಪ್ರಕಾಶ್ ಅವರ ಜಯಂತಿ ಆಚರಿಸಲು ನೈತಿಕತೆ ಇಲ್ಲ ಎಂದು ಹೇಳಿದರು.

ಜೆಡಿಎಸ್‌ನ ನೂತನ ಕಚೇರಿ ಕಟ್ಟಡಕ್ಕೆ ಜೆಪಿ ಭವನ ಎಂದು ನಾಮಕಾರಣ ಮಾಡಲು ಯಾರೂ ಹೇಳಿಲ್ಲ. ನಾನೇ ಅವರ ಸ್ಫೂರ್ತಿಯಿಂದ ಇಟ್ಟಿದ್ದೇನೆ. ಇಂದು ಗಾಂಧೀಜಿಯನ್ನೂ ಕೂಡ ಮರೆಯುವಂತಾಗಿರುವುದು ಖೇದಕರ. ಯುವಕರು ಗಾಂಧೀಜಿ, ಜೆಪಿ ಬಗ್ಗೆ ತಿಳಿದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಜೆಪಿ ಗಾಂಧೀಜಿ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರವಾಗಬೇಕಿದೆ ಎಂದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜೆಪಿ ಅವರ ಕೊನೆಯ ದಿನಗಳಲ್ಲಿ ಜೆಪಿ ಅವರನ್ನು ಬಹಳ ನಿಕೃಷ್ಟವಾಗಿ ಕಂಡರು, ಜೆಪಿ ಅವರ ಹೋರಾಟದಿಂದ ನಾವೆಲ್ಲ ಕಾಂಗ್ರೆಸೇತರ ಸರಕಾರ ಮಾಡಲು ಸಾಧ್ಯವಾಯಿತು. 70ರ ದಶಕದ ತುರ್ತು ಪರಿಸ್ಥಿತಿಯಲ್ಲಿ ದೇಶವನ್ನು ಒಂದುಗೂಡಿಸಿ ಕೇಂದ್ರ ಸರಕಾರದ ವಿರುದ್ಧ ಆಂದೋಲನ ರೂಪಿಸಿ ಸರಕಾರವನ್ನೇ ಪತನಗೊಳಿಸಿದರು ಎಂದು ಸ್ಮರಿಸಿದರು.

ಜಯಪ್ರಕಾಶ್ ನಾರಾಯಣ್ ಅವರ ಒಡನಾಡಿ ನಾರಾಯಣ ಪ್ರಸಾದ್ ಅಗರವಾಲ್ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ಜಯಪ್ರಕಾಶ್‌ರೊಂದಿಗೆ ಜೈಲುವಾಸ ಅನುಭವಿಸಿದೆವು. ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಜೆಪಿ ಹೋರಾಡಿದ್ದರು. ಜೆಪಿ ಅವರ ವಿಚಾರಧಾರೆಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಲೋಕನಾಯಕ್ ಜಯಪ್ರಕಾಶ್ ನಾರಾಯಣ ಆಂದೋಲನ, ಹೋರಾಟ ಜೀವನ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮಾಜಿ ಸಚಿವ ಎಚ್.ವಿಶ್ವನಾಥ್, ಶಾಸಕರಾದ ಎಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ರಮೇಶ್ ಬಾಬು, ಎಚ್.ಸಿ.ನೀರಾವರಿ ಸೇರಿದಂತೆ ಇತರರು ಇದ್ದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ 70ರ ದಶಕದಲ್ಲಿ ತೋರಿದ ದರ್ಪ ಇಂದಿನ ಪ್ರಧಾನಿ ಮೋದಿಯ ನಡೆಯಲ್ಲಿ ಗೋಚರಿಸುತ್ತಿದೆ. ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಎದುರಾಗಬಹುದು. ಮುಂದೆ ಒಂದು ದಿನ ಒಂದು ದೇಶ, ಒಬ್ಬನೇ ಮೋದಿ ಎಂಬ ಘೋಷಣೆ ಮಾಡಿ ಏಕವ್ಯಕ್ತಿ ಅಧಿಪತ್ಯ ನಡೆಸಲುಬಹುದು.
-ವೈಎಸ್‌ವಿ ದತ್ತ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News