ರೊಹಿಂಗ್ಯಾ ನಿರಾಶ್ರಿತರಿಗೆ ನೆರವಾಗಲು ಬಾಂಗ್ಲಾಕ್ಕೆ ಬಂದ ಕೆಎಸ್‌ರಿಲೀಫ್

Update: 2017-10-12 16:38 GMT

ಜಿದ್ದಾ (ಸೌದಿ ಅರೇಬಿಯ), ಅ. 12: ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ವಲಸೆ ಬಂದಿರುವ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರಿಗೆ ನೆರವು ನೀಡುವುದಕ್ಕಾಗಿ ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್) ಬಾಂಗ್ಲಾದೇಶವನ್ನು ತಲುಪಿದೆ.

 ದಮನಿತ ಸಮುದಾಯಕ್ಕೆ ನೆರವು ನೀಡುವ ಉದ್ದೇಶದ ಜಂಟಿ ಯೋಜನೆಯೊಂದಕ್ಕೆ ಕೆಎಸ್‌ರಿಲೀಫ್ ಬುಧವಾರ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ (ಯುಎನ್‌ಎಚ್‌ಸಿಆರ್) ಜೊತೆ ಸಹಿ ಹಾಕಿದೆ.

ಯೋಜನೆಗೆ ಯುಎನ್‌ಎಚ್‌ಸಿಆರ್ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಮತ್ತು ಕೆಎಸ್‌ರಿಲೀಫ್‌ನ ಸೂಪರ್‌ವೈಸರ್ ಜನರಲ್ ಅಬ್ದುಲ್ಲಾ ಅಲ್ ರಬೀಆ ಸಹಿ ಹಾಕಿದರು.

‘‘ಜಗತ್ತಿನಾದ್ಯಂತದ ದಮನಿತರ ಜೊತೆಗೆ ಸೌದಿ ಅರೇಬಿಯಾ ನಿಲ್ಲುತ್ತದೆ ಹಾಗೂ 232 ಮಾನವೀಯ ಮತ್ತು ಪರಿಹಾರ ಕಾರ್ಯಕ್ರಮಗಳ ಮೂಲಕ 38 ದೇಶಗಳಲ್ಲಿ ಅದು ಸಂತ್ರಸ್ತರಿಗೆ ನೆರವು ನೀಡಿದೆ’’ ಎಂದು ಅಲ್-ರಬೀಆ ಸುದ್ದಿಗಾರರಿಗೆ ತಿಳಿಸಿದರು.

ಸೌದಿ ಅರೇಬಿಯವು 5,61,911 ಯಮನ್ ನಿರಾಶ್ರಿತರು, 2,62,573 ಸಿರಿಯ ನಿರಾಶ್ರಿತರು ಮತ್ತು 3 ಲಕ್ಷಕ್ಕೂ ಅಧಿಕ ಬರ್ಮಾ ನಿರಾಶ್ರಿತರಿಗೆ ಆಶ್ರಯ ನೀಡಿದೆ ಹಾಗೂ ಅವರು ಘನತೆಯಿಂದ ಬಾಳಲು ಅಗತ್ಯವಾದ ಎಲ್ಲ ಸೌಕರ್ಯಗಳು ಮತ್ತು ಸೇವೆಗಳನ್ನು ನೀಡಿದೆ ಎಂದು ಅವರು ತಿಳಿಸಿದರು.

ರೊಹಿಂಗ್ಯಾ ಶಿಬಿರಗಳಿಗೆ ಹೋಗದಂತೆ 3 ಸಂಘಟನೆಗಳಿಗೆ ನಿಷೇಧ

ಮೂರು ನೆರವು ಸಂಘಟನೆಗಳು ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತರೊಂದಿಗೆ ಕೆಲಸ ಮಾಡುವುದನ್ನು ಸರಕಾರ ನಿಷೇಧಿಸಿದೆ ಎಂದು ಸಂಸದರೊಬ್ಬರು ಗುರುವಾರ ತಿಳಿಸಿದರು.

ಈ ಸಂಘಟನೆಗಳು ಶಿಬಿರಗಳಲ್ಲಿ ವಾಸಿಸುತ್ತಿರುವ ರೊಹಿಂಗ್ಯಾ ಮುಸ್ಲಿಮರ ಮನಪರಿವರ್ತನೆ ಮಾಡುವ ಸಾಧ್ಯತೆಯಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಅಂತಾರಾಷ್ಟ್ರೀಯ ಸಂಘಟನೆಗಳಾದ ಮುಸ್ಲಿಮ್ ಏಡ್ ಮತ್ತು ಇಸ್ಲಾಮಿಕ್ ರಿಲೀಫ್ ಹಾಗೂ ಬಾಂಗ್ಲಾದೇಶದ ಅಲ್ಲಾಮಾ ಫಝ್ಲುಲ್ಲಾ ಫೌಂಡೇಶನ್‌ಗಳು ಬಾಂಗ್ಲಾದೇಶದ ಕಾಕ್ಸ್ ಬಝಾರ್ ಜಿಲ್ಲೆಯಲ್ಲಿರುವ ರೊಹಿಂಗ್ಯ ನಿರಾಶ್ರಿತ ಶಿಬಿರಗಳಿಗೆ ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಆಡಳಿತಾರೂಢ ಅವಾಮಿ ಲೀಗ್‌ನ ಸಂಸದ ಮಹ್ಜಾಬೀನ್ ಖಾಲಿದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News