ಭಿನ್ನಾಭಿಪ್ರಾಯವನ್ನು ದಮನಿಸುವ ಧೋರಣೆ 'ಅಪಾಯಕಾರಿ': ಬಾಂಬೆ ಹೈಕೋರ್ಟ್

Update: 2017-10-12 17:20 GMT

ಮುಂಬೈ, ಅ.12: ಭಿನ್ನಾಭಿಪ್ರಾಯವನ್ನು ದಮನಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದನ್ನು ಖಂಡಿಸಿರುವ ಬಾಂಬೆ ಹೈಕೋರ್ಟ್, ವಿಪಕ್ಷಗಳನ್ನು ನಿರ್ನಾಮಗೊಳಿಸುವ ಧೋರಣೆ ಅಪಾಯಕಾರಿ ಎಂದು ತಿಳಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ ಹಾಗೂ ಜೀವನವೌಲ್ಯಗಳಿಗೆ ಗೌರವವೇ ಇಲ್ಲ ಎಂಬ ಸ್ಥಿತಿಯಿದೆ. ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಕೇವಲ ಚಿಂತಕರಷ್ಟೇ ಅಲ್ಲ, ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಮಾತಾಡಿದ ಎಲ್ಲಾ ವ್ಯಕ್ತಿಗಳನ್ನು ಅಥವಾ ಸಂಘಟನೆಗಳನ್ನೂ ಗುರಿಯಾಗಿಸಿಕೊಳ್ಳಲಾಗುತ್ತಿದೆ. ನನ್ನನ್ನು ಯಾರಾದರೂ ವಿರೋಧಿಸಿದರೆ ಅವರನ್ನು ನಾಶಮಾಡಬೇಕು ಎಂಬ ಧೋರಣೆ ಇತ್ತೀಚಿನ ದಿನದಲ್ಲಿ ಹೆಚ್ಚುತ್ತಿದೆ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಗೋವಿಂದ್ ಪನ್ಸಾರೆ ಹಾಗೂ ನರೇಂದ್ರ ದಾಭೋಳ್ಕರ್ ಹತ್ಯೆಯ ಪ್ರಕರಣದ ತನಿಖೆಯ ಬಗ್ಗೆ ಮೇಲ್ವಿಚಾರಣೆ ನಡೆಸಬೇಕೆಂದು ಕೋರಿ ಇವರಿಬ್ಬರ ಕುಟುಂಬವರ್ಗದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ವಿಭಾಗೀಯ ಪೀಠ ಈ ಅಭಿಪ್ರಾಯ ಸೂಚಿಸಿದೆ.
ಪನ್ಸಾರೆ ಹತ್ಯೆಯ ತನಿಖೆ ನಡೆಸುತ್ತಿರುವ ಸಿಬಿಐ ಹಾಗೂ ದಾಬೋಳ್ಕರ್ ಹತ್ಯೆಯ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಇದುವರೆಗಿನ ತನಿಖೆಯ ವಿವರವನ್ನು ನ್ಯಾಯಪೀಠಕ್ಕೆ ಸಲ್ಲಿಸಿತು. ಆದರೆ ಪ್ರತೀ ಬಾರಿ ವಿಚಾರಣೆ ಮುಂದೂಡಿ, ಮರಳಿ ವಿಚಾರಣೆಗೆ ಕಲಾಪ ಆರಂಭಿಸುವ ಅವಧಿಯಲ್ಲಿ ಮತ್ತಷ್ಟು ಅಮೂಲ್ಯ ಜೀವಗಳು ನಾಶ ಹೊಂದುತ್ತಿವೆ ಎಂದು ನ್ಯಾಯಪೀಠ ಕಳವಳ ಸೂಚಿಸಿತು. ಅಲ್ಲದೆ ತನಿಖಾ ಸಂಸ್ಥೆಗಳು ತಮ್ಮ ಕಾರ್ಯವಿಧಾನ ಬದಲಿಸಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಪರಾಧಿಗಳನ್ನು ಪತ್ತೆಹಚ್ಚಬೇಕು ಎಂದೂ ನ್ಯಾಯಪೀಠ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News