ಟಾಷ್ಕೆಂಟ್ ಚಾಲೆಂಜರ್: ಭಾಂಬ್ರಿ-ಶರಣ್ ಫೈನಲ್‌ಗೆ

Update: 2017-10-12 18:35 GMT

ಟಾಷ್ಕೆಂಟ್, ಅ.12: ಭಾರತದ ಡಬಲ್ಸ್ ಆಟಗಾರರಾದ ಯೂಕಿ ಭಾಂಬ್ರಿ ಹಾಗೂ ದಿವಿಜ್ ಶರಣ್ ಟಾಷ್ಕೆಂಟ್ ಚಾಲೆಂಜರ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

 150,000 ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಸೆಮಿಫೈನಲ್‌ನಲ್ಲಿ ಶ್ರೇಯಾಂಕರಹಿತ ಭಾಂಬ್ರಿ-ಶರಣ್ ಸ್ಪೇನ್‌ನ ಗುಲ್ಲೆರ್ಮೊ ಗಾರ್ಸಿಯಾ-ಲೊಪೆಝ್ ಹಾಗೂ ಎನ್ರಿಕ್ ಲೊಪೆಝ್-ಪೆರೆಝ್‌ರನ್ನು 3-6, 7-5, 10-6 ಸೆಟ್‌ಗಳ ಅಂತರದಿಂದ ಮಣಿಸಿದರು. ಎಡಗೈ ಆಟಗಾರ ಶರಣ್ ಈ ಋತುವಿನಲ್ಲಿ ಚಾಲೆಂಜರ್ ಟೂರ್‌ನಲ್ಲಿ ಎರಡನೆ ಬಾರಿ ಫೈನಲ್‌ಗೆ ತಲುಪಿದ್ದಾರೆ. ಫ್ರಾನ್ಸ್ ನಲ್ಲಿ ನಡೆದ ಚಾಲೆಂಜರ್ ಟೂರ್ನಿಯಲ್ಲಿ ಪೂರವ್ ರಾಜಾರೊಂದಿಗೆ ಫೈನಲ್‌ಗೆ ತಲುಪಿದ್ದ ಶರಣ್ ಪ್ರಶಸ್ತಿ ಜಯಿಸಿದ್ದರು. ಚೀನಾ ಓಪನ್‌ನಲ್ಲಿ ಪೂರವ್ ರಾಜಾರೊಂದಿಗೆ ಡಬಲ್ಸ್ ಪಂದ್ಯ ಆಡಿದ್ದ ಶರಣ್ ದ್ವಿತೀಯ ಸ್ಥಾನ ಪಡೆದಿದ್ದರು. 2017ರ ಋತುವಿನಲ್ಲಿ ಏಳು ಟೂರ್ನಿಗಳಲ್ಲಿ ಭಾಗವಹಿಸಿರುವ ಯೂಕಿಗೆ ಡಬಲ್ಸ್‌ನಲ್ಲಿ ಇದು ಮೊದಲ ಫೈನಲ್ ಪಂದ್ಯವಾಗಿದೆ.

ವಿಜೇತರು 125 ಎಟಿಪಿ ಅಂಕ ಹಾಗೂ 9300 ಡಾಲರ್ ಬಹುಮಾನ ಹಂಚಿಕೊಳ್ಳಲಿದ್ದಾರೆ. ರನ್ನರ್ಸ್ -ಅಪ್ ತಂಡ 75 ಅಂಕದ ಜೊತೆಗೆ 5400 ಡಾಲರ್ ಬಹುಮಾನ ಪಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News