ಯುನೆಸ್ಕೋ ಸದಸ್ಯತ್ವ ತೊರೆದ ಅಮೆರಿಕಾ

Update: 2017-10-13 07:10 GMT

ವಾಷಿಂಗ್ಟನ್,ಅ.13 :  ವಿಶ್ವ ಸಂಸ್ಥೆಯ ಪಾರಂಪರಿಕ ಸಂಘಟನೆ ಯುನೆಸ್ಕೋ ದ  ಮುಂದುವರಿದ ಇಸ್ರೇಲ್ ವಿರೋಧಿ ತಾರತಮ್ಯವನ್ನು ವಿರೋಧಿಸಿ ತಾನು  ಅದರ ಸದಸ್ಯತ್ವವನ್ನು ತೊರೆಯುತ್ತಿರುವುದಾಗಿ ಅಮೆರಿಕಾ ಹೇಳಿದೆ. ಅಮೆರಿಕಾದ ಈ ನಿರ್ಧಾರ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ತಾನು ಕೂಡಾ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ವಿಶ್ವ ಸಂಸ್ಥೆಯ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಏಜನ್ಸಿಯ ಸದಸ್ಯತ್ವವನ್ನು ಬಿಡುವ ಬಗ್ಗೆ ಯೋಚಿಸುತ್ತಿರುವುದಾಗಿ ಇಸ್ರೇಲ್ ಹೇಳಿದೆ.

ಅಮೆರಿಕಾದ ನಿರ್ಧಾರವನ್ನು ಸ್ವಾಗತಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇದೊಂದು ದಿಟ್ಟ ಹಾಗೂ ನೈತಿಕತೆಯಿಂದ ಕೂಡಿದ  ನಿರ್ಧಾರ, ಯುನೆಸ್ಕೋ ಒಂದು ಅಸಂಬದ್ಧ ಸಂಸ್ಥೆಯಾಗಿ ಬಿಟ್ಟಿದೆ. ಇತಿಹಾಸವನ್ನು ಸಂರಕ್ಷಿಸುವ ಬದಲು ಅದು ಇತಿಹಾಸವನ್ನು ತಿರುಚುತ್ತಿದೆ'' ಎಂದು ಆರೋಪಿಸಿದ್ದಾರೆ.

ಆಕ್ರಮಿತ ಫೆಲೆಸ್ತೀನಿನ ದಕ್ಷಿಣದಲ್ಲಿರುವ ಹೆಬ್ರಾನ್ ನಗರವನ್ನು ಫೆಲೆಸ್ತೀನಿ ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೋ  ಘೋಷಿಸಿರುವುದು ಅಮೆರಿಕಾ ಹಾಗೂ ಇಸ್ರೇಲ್ ದೇಶಗಳಿಗೆ ಸರಿ ಕಂಡು ಬಂದಿಲ್ಲ.
ಅಮೆರಿಕಾದ ನಿರ್ಧಾರದ ಬಗ್ಗೆ ಯುನೆಸ್ಕೋ ಮಹಾನಿರ್ದೇಶಕಿ ಐರಿನಾ ಬೊಕೊವ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ, ಈ ನಿರ್ಧಾರದಿಂದಾಗಿ ವಿಶ್ವಸಂಸ್ಥೆ ಕುಟುಂಬಕ್ಕೆ  ಹಾಗೂ ಅಮೆರಿಕಾಗೂ ನಷ್ಟವುಂಟಾಗಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕಾ ಯುನೆಸ್ಕೋದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೂ  ಸದಸ್ಯೇತರನಾಗಿ  ವಿವಿಧ ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ನೀಡುವುದನ್ನು ಮುಂದುವರಿಸುವುದಾಗಿ  ಅಮೆರಿಕಾ ತನ್ನ ನಿರ್ಧಾರ  ಘೋಷಿಸುವಾಗ ತಿಳಿಸಿದೆ. ಅಮೆರಿಕಾ ಸದಸ್ಯತ್ವ ಡಿಸೆಂಬರ್ 31,2018ರಲ್ಲಿ ಅಂತ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News