ಗುಂಡಿಕ್ಕಿ ಮಗು ಅಪಹರಣಕಾರನ ಬಂಧನ
ಬೆಂಗಳೂರು, ಅ.13: ಮಗುವನ್ನು ಅಪಹರಿಸಿದ್ದ ಆರೋಪಿಯೊಬ್ಬನನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದ ದುಷ್ಕರ್ಮಿಗೆ ಪೊಲೀಸರು ಗುಂಡಿಕ್ಕಿ ಬಂಧಿಸಿರುವ ಘಟನೆ ಬಾಗಲೂರಿನ ಮಿಟಗಾನಹಳ್ಳಿ ಬಳಿ ನಡೆದಿದೆ.
ಇಲ್ಲಿನ ಭಾರತಿನಗರದ ನಿವಾಸಿ ಶಹನಾಝ್(36), ಗೋವಿಂದಪುರದ ನಿವಾಸಿಗಳಾದ ಮುಹಮ್ಮದ್ ನೂರುಲ್ಲಾ(23), ಇಸಾಕ್ ಖಾನ್(19) ಹಾಗೂ ಅಬ್ದುಲ್ ವಾಹೀದ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಆರೋಪಿ ಶಹನಾಝ್, ಮೊದಲನೆ ಪತಿ ಸಾವನ್ನಪ್ಪಿದ ನಂತರ ಗೌರಿಪಾಳ್ಯ ನಿವಾಸಿ ಫೈರೋಝ್ ಖಾನ್ ಎಂಬಾತನನ್ನು ಎರಡನೆ ಮದುವೆಯಾಗಿದ್ದಳು ಎನ್ನಲಾಗಿದೆ. ಫೈರೋಝ್ ಸಂಸಾರ ನಿರ್ವಹಣೆಗೆ ಹಣ ಕೊಡುತ್ತಿದ್ದ. ನಂತರದ ಕಾಲದಲ್ಲಿ ಆತ ಮನೆಗೆ ಬರುವುದನ್ನೆ ಮರೆತಿದ್ದ. ಆತನ ವರ್ತನೆಯಿಂದ ಬೇಸತ್ತ ಶಹನಾಝ್ ತನಗೆ ಮಗುವಾಗಿದೆ ಎಂದು ನಂಬಿಸಿ ಹಣ ಪಡೆಯುವ ಸಂಚು ರೂಪಿಸಿದ್ದಳು ಎಂದು ತಿಳಿದು ಬಂದಿದೆ.
ಇದಕ್ಕಾಗಿ ತನ್ನ ಮಗಳಿಗೆ ಪರಿಚಯವಿದ್ದ ಗೋವಿಂದಪುರದ ನಿವಾಸಿಗಳಾದ ನೂರುಲ್ಲಾ ಮತ್ತವರ ಸಹಚರರಿಗೆ ಆಸ್ಪತ್ರೆಯಿಂದ ಚಿಕ್ಕ ಮಗುವೊಂದು ಅಪಹರಿಸುವಂತೆ ಶಹನಾಝ್ ಹೇಳಿರುವುದಾಗಿ ತಿಳಿದು ಬಂದಿದೆ. ಮಗು ಅಪಹರಣಕ್ಕೆ ಸಂಚು ರೂಪಿಸಿದ ಆರೋಪಿ ನೂರುಲ್ಲಾ ಮತ್ತವನ ತಂಡ ಮೂರು ದಿನಗಳ ಹಿಂದೆ ಕೊತ್ತನೂರು ಠಾಣಾ ವ್ಯಾಪ್ತಿಯ ಹೆಗಡೆನಗರ ಸಮೀಪದ ಎಕ್ಸ್ ಸರ್ವೀಸ್ ಬಡಾವಣೆಯ ಲೆಬರ್ ಶೆಡ್‌ನಲ್ಲಿ ವಾಸವಿದ್ದ ದಂಪತಿಯ ಗಂಡು ಮಗುವನ್ನು ಬೈಕ್‌ನಲ್ಲಿ ಅಪಹರಿಸಿ ಪರಾರಿಯಾಗಿದ್ದರು ಎನ್ನಲಾಗಿದೆ.
ಅಪಹರಣಕಾರರು ಮಗು ಅಪಹರಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಈ ಮಾಹಿತಿಯನ್ನು ಆಧರಿಸಿ ಶಹನಾಝ್, ಇಶಾಕ್ ಮತ್ತು ಅಬ್ದುಲ್ ವಾಹೀದ್‌ನನ್ನು ಬಂಧಿಸಲಾಗಿತ್ತು. ಆದರೆ, ಆರೋಪಿ ನೂರುಲ್ಲಾ ಮಾತ್ರ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ ಆತನ ಮನೆ ಮೇಲೆ ದಾಳಿ ಮಾಡಿ ಬಂಧಿಸಲು ಯತ್ನಿಸಿದಾಗ ಆತ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ. ಈ ವೇಳೆ ರಕ್ಷಣೆಗಾಗಿ ಪೊಲೀಸರು ಆತನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.