ಏಷ್ಯಾಕಪ್ ಹಾಕಿ: ಭಾರತಕ್ಕೆ ಜಯ

Update: 2017-10-13 18:30 GMT

ಢಾಕಾ, ಅ.13: ಏಷ್ಯಾಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ಆತಿಥೇಯ ಬಾಂಗ್ಲಾದೇಶ ವಿರುದ್ಧ 7-0 ಅಂತರದಲ್ಲಿ ಜಯ ಗಳಿಸಿದೆ. ಈ ಮೂಲಕ ಭಾರತ ಎರಡು ಗೆಲುವಿನೊಂದಿಗೆ ‘ಎ’ ಗುಂಪಿನಲ್ಲಿ 6 ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿದೆ.

ಭಾರತ ಬುಧವಾರ ಜಪಾನ್ ವಿರುದ್ಧ 5-1 ಅಂತರದಲ್ಲಿ ಜಯ ಗಳಿಸಿತ್ತು.

ಗುರ್ಜತ್ ಸಿಂಗ್ 7ನೆ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸುವ ಮೂಲಕ ಬಾಂಗ್ಲಾ ವಿರುದ್ಧ ಭಾರತದ ಗೋಲು ಖಾತೆ ತೆರೆದರು. 11ನೆ ನಿಮಿಷದಲ್ಲಿ ಎಸ್.ವಿ.ಸುನೀಲ್ ನೆರವಿನಲ್ಲಿ ಆಕಾಶ್‌ದೀಪ್ ಸಿಂಗ್ ಚೆಂಡನ್ನು ಗುರಿಯತ್ತ ತಲುಪಿಸುವ ಮೂಲಕ ಭಾರತಕ್ಕೆ 2-0 ಅಂತರದಲ್ಲಿ ಮುನ್ನಡೆ ಸಾಧಿಸಲು ನೆರವಾದರು. 13ನೆ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಭಾರತದ ಪರ ಮೂರನೆ ಗೋಲು ದಾಲಿಸಿದರು. 20ನೆ ನಿಮಿಷದಲ್ಲಿ ಅಮಿತ್ ರೋಹಿದಾಸ್ ನಾಲ್ಕನೆ ಗೋಲು ಜಮೆ ಮಾಡಿದರು.

 ಹರ್ಮನ್‌ಪ್ರೀತ್ ಸಿಂಗ್ 28ನೆ ನಿಮಿಷದಲ್ಲಿ ತನಗೆ ಲಭಿಸಿದ ಅವಕಾಶದಲ್ಲಿ ಗೋಲು ಬಾರಿಸಿ ಭಾರತ ಪ್ರಥಮಾರ್ಧದಲ್ಲಿ 5-0 ಮುನ್ನಡೆ ಸಾಧಿಸಲು ನೆರವಾದರು.

     ಭಾರತಕ್ಕೆ ಆರಂಭದಲ್ಲಿ 8 ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿದ್ದರೂ ಆ ಅವಕಾಶದಲ್ಲಿ ಗೋಲು ಬರಲಿಲ್ಲ. ಒಂದು ವೇಳೆ ಪೆನಾಲ್ಟಿ ಅವಕಾಶವನ್ನು ಗೋಲು ಆಗಿ ಪರಿವರ್ತಿಸಲು ಯಶಸ್ವಿಯಾಗಿದ್ದರೆ ಭಾರತದ ಗೋಲುಗಳ ಸಂಖ್ಯೆ ಇನ್ನಷ್ಟು ಏರುವ ಅವಕಾಶ ಇತ್ತು. ಭಾರತಕ್ಕೆ ದೊರೆತ 9ನೆ ಪೆನಾಲ್ಟಿ ಅವಕಾಶದಲ್ಲಿ ರಮಣದೀಪ್ ಸಿಂಗ್ ಗೋಲು ದಾಖಲಿಸುವ ಮೂಲಕ ಭಾರತದ ಗೋಲು ಸಂಖ್ಯೆಯನ್ನು 6ಕ್ಕೆ ಏರಿಸಿದರು. 47ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಹರ್ಮನ್‌ಪ್ರೀತ್ ಸಿಂಗ್ 7 ಗೋಲು ಜಮೆ ಮಾಡಿದರು. ಇದು ಕೊನೆಯ ಗೋಲು ಆಗಿತ್ತು. ಭಾರತಕ್ಕೆ ಮತ್ತೆ ಗೋಲು ದಾಖಲಿಸಲು ಬಾಂಗ್ಲಾದ ಆಟಗಾರರು ಅವಕಾಶ ನೀಡಲಿಲ್ಲ. ಭಾರತ ಈ ಪಂದ್ಯದಲ್ಲಿ 7-0 ಅಂತರದಲ್ಲಿ ಜಯ ಗಳಿಸಿತು. ಭಾರತ ರವಿವಾರ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News