×
Ad

ಕನ್ನಡಕ್ಕೊಂದು ಬಾವುಟ ಇರಲೇಬೇಕು, ಇದರಿಂದ ರಾಷ್ಟ್ರಧ್ವಜದ ಮೇಲಿನ ಗೌರವ ಕಡಿಮೆ ಆಗದು: ಸಿಎಂ ಸಿದ್ದರಾಮಯ್ಯ

Update: 2017-10-14 19:49 IST

ಬೆಂಗಳೂರು, ಅ. 14: ರಾಜ್ಯದಲ್ಲಿ ವಾಸ ಮಾಡುತ್ತಿರುವ ಪರಭಾಷಿಕರು ಕನ್ನಡಿಗರಾಗಬೇಕು ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಿನ ಆರೂವರೆ ಕೋಟಿ ಜನರ ಪ್ರತಿನಿಧಿಯಾಗಿ ಹೇಳುತ್ತೇನೆ, ಕನ್ನಡಕ್ಕೊಂದು ಬಾವುಟ ಇರಲೇಬೇಕು. ಇದರಿಂದ ರಾಷ್ಟ್ರಧ್ವಜದ ಮೇಲಿನ ಗೌರವ ಯಾವುದೇ ಕಾರಣಕ್ಕೂ ಕಡಿಮೆ ಆಗುವುದಿಲ್ಲ ಎಂದು ನುಡಿದಿದ್ದಾರೆ.

ಶನಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಕನ್ನಡಿಗರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಾಸಿಸುವವರು ಅವರು ಯಾವುದೇ ಭಾಷಿಕರಾಗಿರಲಿ, ಮೊದಲು ಕನ್ನಡಿಗರು. ಪ್ರತಿಯೊಬ್ಬರೂ ಕನ್ನಡಿಗರಾಗಲೇಬೇಕು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದರು.

ನಮ್ಮ ಸರಕಾರ ಕನ್ನಡದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ರಕ್ಷಣೆಗೆ ಬದ್ಧವಾಗಿದೆ. ಈ ನಾಡಿನ ಮುಖ್ಯಮಂತ್ರಿ ಆಗಿ 6.5 ಕೋಟಿ ಜನರ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ. ಕನ್ನಡಕ್ಕೊಂದು ಬಾವುಟ ಇರಲೇಬೇಕು. ಪ್ರತ್ಯೇಕ ಬಾವುಟ ಇರುವಂತಿಲ್ಲ ಎಂದು ಸಂವಿಧಾನದಲ್ಲಿ ಹೇಳಿಲ್ಲ. ರಾಷ್ಟ್ರಧ್ವಜದ ಮೇಲಿನ ಗೌರವವೂ ಕಡಿಮೆ ಆಗುವುದಿಲ್ಲ. ರಾಷ್ಟ್ರಧ್ವಜ ಎಂದೆಂದೂ ಮೇಲೆಯೇ ಹಾರುತ್ತದೆ ಎಂದರು.

ನಮ್ಮ ಮೆಟ್ರೋ ರೈಲಿನಲ್ಲಿ ಹಿಂದಿ ಬಳಕೆ ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರಕ್ಕೆ ಖಡಾಖಂಡಿತವಾಗಿ ಪತ್ರ ಬರೆದು ತಿಳಿಸಿದ್ದೇನೆ. ತಮಿಳುನಾಡು, ಕೇರಳದ ಮೆಟ್ರೋ ರೈಲಿನಲ್ಲಿ ಇಲ್ಲದ ಹಿಂದಿ ಇಲ್ಲೇಕೆ ಬೇಕು ಎಂದ ಅವರು, ಕೃಷ್ಣಾ, ಕಾವೇರಿ, ಮಹಾದಾಯಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಆದರೆ, ನ್ಯಾಯಕ್ಕಾಗಿ ನಮ್ಮ ಸರಕಾರ ಹೋರಾಡುತ್ತದೆ ಎಂದರು.

‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಎಲ್ಲಾದರೂ ಇರು, ಎಂತಾದರೂ ಇರು. ಮೊದಲು ಕನ್ನಡಿಗನಾಗಿರು’ ಎಂಬ ರಾಷ್ಟ್ರಕವಿ ಕುವೆಂಪು ಅವರ ಮಂತ್ರವನ್ನು ಸದಾ ಜಪಿಸುವ ವಾತಾವರಣ ನಿರ್ಮಾಣ ಆಗಬೇಕು ಎಂದ ಅವರು, ಕನ್ನಡಕ್ಕಾಗಿ ಹೋರಾಟ ಮಾಡಿರುವ ಕನ್ನಡಿಗರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ಸರಕಾರ ಹಿಂಪಡೆಯಲಿದೆ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಕೂಡಲ ಸಂಗಮದ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ನಾಡೋಜ ಹಂಪ ನಾಗರಾಜಯ್ಯ, ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News