ಕೇಂದ್ರದ ಯೋಜನೆಗಳಿಂದ ರೈತ-ಕಾರ್ಮಿಕರಿಗೆ ಉಳಿಗಾಲವಿಲ್ಲ: ದೊರೆಸ್ವಾಮಿ
ಬೆಂಗಳೂರು, ಅ.14: ಕೇಂದ್ರ ಸರಕಾರದ ಯೋಜನೆಗಳಿಂದ ದೇಶದ ರೈತರಿಗೆ, ಕಾರ್ಮಿಕರಿಗೆ ಉಳಿಗಾಲವೇ ಇಲ್ಲದಂತಾಗಿದೆ. ಎಲ್ಲ ನೀತಿಗಳು ಬಂಡವಾಳಶಾಹಿ ಪರವಾಗಿವೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಗ್ರಾಮ ಸೇವಾ ಸಂಘದ ನೇತೃತ್ವದಲ್ಲಿ ನಗರದ ನಿಡುಮಾಮಿಡಿ ಮಠದಲ್ಲಿ ನಡೆದ ಕರನಿರಾಕರಣ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ದೇಶವನ್ನು ನಿರ್ಮಿಸಿದ್ದ ‘ಕೈ ಉತ್ಪನ್ನಗಳ’ ಉಳಿವಿಗಾಗಿ ಇವತ್ತು ಉಪವಾಸ ಸತ್ಯಾಗ್ರಹ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ನಮ್ಮೆಲ್ಲರ ದುರಂತವೆಂದು ತಿಳಿಸಿದರು.
ದೇಶದಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾದವು. ಆದರೆ, ಉದ್ಯೋಗ ಮಾತ್ರ ಹೆಚ್ಚಾಗಲಿಲ್ಲ. ಈ ಕೈಗಾರಿಕೆಗಳಲ್ಲಿ ದೈತ್ಯ ಯಂತ್ರಗಳು ಸ್ಥಾಪನೆಯಾದಂತೆ ಉದ್ಯೋಗಗಳು ನಿರ್ಮೂಲನೆ ಆಗುತ್ತಾ ಬಂದಿವೆ. ಈಗ ಆಧುನಿಕರಣ ಹಾಗೂ ಜಾಗತೀಕರಣಕ್ಕೆ ಪ್ರಭಾವಕ್ಕೆ ಒಳಗಾಗಿ ಕೈ ಉತ್ಪನ್ನಗಳು ನಾಶವಾಗುತ್ತಿವೆ. ಇದಕ್ಕೆ ಪೂರಕವಾಗಿ ನಮ್ಮ ಸರಕಾರಗಳು ಗ್ರಾಮ ವಿರೋಧಿ ಯೋಜನೆಗಳನ್ನೇ ಜಾರಿಗೆ ತರುತ್ತಿವೆ ಎಂದು ಹೇಳಿದರು.
ಹೊರ ದೇಶಗಳಿಂದ ಬೃಹತ್ ಕಂಪೆನಿಗಳಿಂದ ಆಹ್ವಾನಿಸಿ ಇಲ್ಲಿನ ಸಂಪತ್ತನ್ನು ಬಂಡವಾಳಶಾಹಿಗಳಿಗೆ ಒತ್ತೆ ಇಡುವುದೇ ಮೇಕ್ ಇನ್ ಇಂಡಿಯಾ ಆಗಿದೆ. ಬೃಹತ್ ಯಂತ್ರಗಳು ನಮ್ಮ ಕೈ ಉತ್ಪನ್ನಗಳನ್ನು ನಾಶ ಮಾಡಿ ಭಾರತದ ಮೂಲ ಸ್ವರೂಪವನ್ನೇ ನಿರ್ಮೂಲನೆ ಮಾಡಲು ಕೇಂದ್ರ ಸರಕಾರವೇ ಸಹಕರಿಸುತ್ತಿರುವುದು ದೇಶದ ದುರಂತವೆಂದು ಅವರು ವಿಷಾದಿಸಿದರು.