ರೊಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್ ವಾಪಸು ಕರೆಸಿಕೊಳ್ಳಲಿ: ಕೋಫಿ ಅನ್ನಾನ್

Update: 2017-10-14 16:22 GMT

ವಿಶ್ವಸಂಸ್ಥೆ, ಅ.14: ಕಳೆದ ಎರಡೂವರೆ ತಿಂಗಳಿನಿಂದ ದೇಶಬಿಟ್ಟು ಪಲಾಯನ ಮಾಡಿರುವ ರೊಹಿಂಗ್ಯಾ ನಿರಾಶ್ರಿತರನ್ನು ನಿರಾಶ್ರಿತರ ಶಿಬಿರಕ್ಕೆ ಕಳಿಸದೆ ಮರಳಿ ‘ಮನೆ’ಗೆ ಕರೆತರಲು ಮ್ಯಾನ್ಮಾರ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಆಗ್ರಹಿಸಿದ್ದಾರೆ.

ಅವರನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸುವುದಲ್ಲ. ಅವರು ತಮ್ಮ ಮನೆಗೆ ಮರಳಲು ಸಹಕಾರ ನೀಡಬೇಕಿದೆ ಎಂದು ಖಾಸಗಿ ಭದ್ರತಾ ಸಮಿತಿಯ ಸಭೆಯೊಂದರಲ್ಲಿ ಭಾಗವಹಿಸಿದ್ದ ಅನ್ನಾನ್ ಅಭಿಪ್ರಾಯಪಟ್ಟರು.

ರೊಹಿಂಗ್ಯಾ ನಿರಾಶ್ರಿತರು ಗೌರವಪೂರ್ವಕವಾಗಿ ಮತ್ತು ಭದ್ರತೆಯ ಭಾವನೆಯೊಂದಿಗೆ ಮನೆಗೆ ಮರಳಲು ಅಗತ್ಯವಾಗಿರುವ ಪರಿಸ್ಥಿತಿಯನ್ನು ಮ್ಯಾನ್ಮಾರ್ ಸರಕಾರ ನಿರ್ಮಿಸಬೇಕಾಗಿದೆ ಮತ್ತು ಹಿಂಸಾಚಾರದಿಂದ ನಲುಗಿದ ರಾಖೈನ್ ರಾಜ್ಯದಲ್ಲಿ ಅವರನ್ನು ಮರಳಿ ನೆಲೆಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅನ್ನಾನ್ ಆಗ್ರಹಿಸಿದರು. ಇತ್ತೀಚೆಗೆ ರೊಹಿಂಗ್ಯಾ ಸಮಸ್ಯೆಯ ಅಧ್ಯಯನಕ್ಕೆ ಮ್ಯಾನ್ಮಾರ್‌ಗೆ ತೆರಳಿದ್ದ ಆಯೋಗದ ನೇತೃತ್ವವನ್ನು ಕೋಫಿ ಅನ್ನಾನ್ ವಹಿಸಿದ್ದರು.

ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆಯಲ್ಲಿನ ಮ್ಯಾನ್ಮಾರ್ ನಿಯೋಗ ನಿರಾಕರಿಸಿದೆ. ರಾಖೈನ್‌ನಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಹಕಾರದ ಉಸ್ತುವಾರಿ ನಿರ್ವಹಿಸಲು ಸಮಿತಿಯೊಂದನ್ನು ರೂಪಿಸಿರುವುದಾಗಿ ಮ್ಯಾನ್ಮಾರ್‌ನ ನಾಯಕಿ ಆಂಗ್‌ಸಾನ್ ಸು ಕಿ ಹೇಳಿದ್ದಾರೆ.

 ಬೌದ್ಧ ಧರ್ಮೀಯರು ಬಹುಸಂಖ್ಯಾತರಾಗಿರುವ ಮ್ಯಾನ್ಮಾರ್‌ನಲ್ಲಿ ಸುಮಾರು 1 ಮಿಲಿಯ ರೊಹಿಂಗ್ಯಾ ನಿವಾಸಿಗಳು ಅಲ್ಪಸಂಖ್ಯಾತರ ಸ್ಥಾನಮಾನ ಪಡೆದಿದ್ದಾರೆ. ಮ್ಯಾನ್ಮಾರ್‌ನಲ್ಲಿ ಹಲವಾರು ರೊಹಿಂಗ್ಯಾ ಕುಟುಂಬಗಳು ತಲೆತಲಾಂತರದಿಂದ ನೆಲೆಸಿದ್ದರೂ, ರೊಹಿಂಗ್ಯಾ ಸಮುದಾಯ ನೆರೆಯ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರೆಂದು ಬೌದ್ಧ ಧರ್ಮೀಯರು ಹೇಳುತ್ತಿದ್ದಾರೆ. 1982ರಲ್ಲಿ ಇವರ ಪೌರತ್ವವನ್ನು ಕಸಿದುಕೊಳ್ಳಲಾಗಿದೆ. ರೊಹಿಂಗ್ಯಾ ಸಮಸ್ಯೆ ಉಲ್ಬಣಗೊಂಡ ಬಳಿಕ ರಾಖೈನ್ ರಾಜ್ಯದ ರಾಜಧಾನಿ ಸಿಟ್ವೆಯ ಹೊರಭಾಗದಲ್ಲಿ ಸುಮಾರು 1,20,000 ರೊಹಿಂಗ್ಯಾ ಜನರು ನೆಲೆಸಿದ್ದಾರೆ.

 ರೊಹಿಂಗ್ಯಾ ಸಮುದಾಯದ ಉಗ್ರಗಾಮಿ ಗುಂಪೊಂದು ಪೊಲೀಸ್ ಠಾಣೆಗಳ ಮೇಲೆ ಸರಣಿ ಆಕ್ರಮಣ ನಡೆಸಿದ ಬಳಿಕ ಮ್ಯಾನ್ಮಾರ್ ಭದ್ರತಾ ಪಡೆಗಳು ಇವರ ವಿರುದ್ಧ ತೀವ್ರ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿದ್ದು, ಈ ವರ್ಷದ ಆಗಸ್ಟ್ 25ರ ಬಳಿಕ 5 ಲಕ್ಷಕ್ಕೂ ಹೆಚ್ಚು ರೊಹಿಂಗ್ಯಾಗಳು ನೆರೆಯ ಬಾಂಗ್ಲಾ ದೇಶಕ್ಕೆ ಪಲಾಯನ ಮಾಡಿದ್ದಾರೆ.

ಸೇನೆ ನಡೆಸಿದ ಕಾರ್ಯಾಚರಣೆ ಸಂದರ್ಭ ರೊಹಿಂಗ್ಯರಿಗೆ ಸೇರಿದ್ದ ಹಲವಾರು ಮನೆಗಳನ್ನು ಸುಟ್ಟುಹಾಕಲಾಗಿದ್ದು, ಅತ್ಯಾಚಾರ, ಥಳಿತ, ಲೂಟಿ ಮುಂತಾದ ಘಟನೆಗಳು ನಡೆದಿರುವುದಾಗಿ ರೊಹಿಂಗ್ಯಾ ಜನತೆ ದೂರಿದ್ದಾರೆ.

 ಇದೊಂದು ‘ಜನಾಂಗ ನಿರ್ಮೂಲನಾ’ ಕಾರ್ಯ ಎಂದು ವಿಶ್ವಸಂಸ್ಥೆ ಹಾಗೂ ಹಲವಾರು ದೇಶಗಳು ಬಣ್ಣಿಸಿದ್ದು ಈ ಹೇಳಿಕೆಯನ್ನು ಮ್ಯಾನ್ಮಾರ್ ಸರಕಾರ ನಿರಾಕರಿಸಿದೆ. ರೊಹಿಂಗ್ಯಾ ಉಗ್ರರು ನಡೆಸಿದ ಭಯೋತ್ಪಾದಕ ಕೃತ್ಯಗಳು ಈ ಬಿಕ್ಕಟ್ಟಿಗೆ ಕಾರಣ ಎಂದು ಮ್ಯಾನ್ಮಾರ್ ಸರಕಾರ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News