ಮುಂದಿನ ಪೀಳಿಗೆಯ ಗತಿಯೇನು ?

Update: 2017-10-15 18:55 GMT

ಮಾನ್ಯರೆ,

ಇತ್ತೀಚೆಗೆ ನೀವು ಸಾಮಾನ್ಯವಾಗಿ ಯಾರನ್ನೇ ಕೇಳಿ ಆಸ್ಪತ್ರೆಗಳೆಂದರೆ ಭಯ ಬೀಳುತ್ತಾರೆ. ಅಲ್ಲಿ ಸಾಮಾನ್ಯ ಕಾಯಿಲೆಗೂ ಕೂಡ ವಿವಿಧ ಚೆಕ್‌ಅಪ್‌ಗಳೆಂದು ಹಣ ಸುಲಿಯುತ್ತಾರೆ ಎಂಬ ಭಾವನೆ ಬೆಳೆದಿದೆ.

ಹಾಗೆ ಶಾಲೆಗಳ ಬಗ್ಗೆಯೂ ಜನ ಗಾಬರಿಯಾಗುತ್ತಾರೆ. ಎಷ್ಟೇ ನೀತಿ ನಿಯಮಗಳಿದ್ದರೂ ಬೇರೆ ಬೇರೆ ರೂಪದಲ್ಲಿ ಹಣ ಕೀಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮತ್ತೆ ಪೊಲೀಸ್ ಸ್ಟೇಷನ್‌ಗಳಿಗೆ ಸಾಮಾನ್ಯ ಜನ ಹೋಗಲು ಈಗಲೂ ಭಯಪಡುತ್ತಾರೆ. ತಾವು ಯಾವುದೇ ತಪ್ಪು ಮಾಡದಿದ್ದರೂ ಕೂಡ ನ್ಯಾಯ ಕೇಳಲು ಅಲ್ಲಿನ ಭ್ರಷ್ಟತೆಗೆ ಸಿಡಿಮಿಡಿಗೊಳ್ಫುತ್ತಾರೆ.

ಇನ್ನು ನ್ಯಾಯಾಲಯದ ವಿಷಯಕ್ಕೆ ಬಂದರೆ ಗೆದ್ದವನು ಸೋತ, ಸೋತವನು ಸತ್ತ ಎಂಬ ನಂಬಿಕೆ ಈಗಲೂ ಬಲವಾಗಿಯೇ ಇದೆ.

ಯಾವುದಾದರೂ ಮನೆ ಅಥವಾ ಸೈಟ್ ಖರೀದಿಯನ್ನು ರಿಜಿಸ್ಟರ್ ಮಾಡಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಲು ಅಲ್ಲಿನ ಕರ್ಮಕಾಂಡಕ್ಕೆ ಹೆದರುತ್ತಾರೆ.

ಇನ್ನು ರಾಜಕೀಯವೆಂದರೆ ಅದೊಂದು ಹೊಲಸು ಎಂದು ಬಹಳ ಹಿಂದಯೇ ನಿರ್ಧರಿಸಲಾಗಿದೆ. ಸಮಾಜ ಸೇವೆಯೆಂದರೆ ಅದೊಂದು ಹಗಲು ದರೋಡೆ ಎಂಬ ಮಟ್ಟಿಗೆ ಬಿಂಬಿತವಾಗಿದೆ. ಅಂದರೆ, ಇಡೀ ವ್ಯವಸ್ಥೆಯು ತನ್ನ ನಂಬಿಕೆ ವಿಶ್ವಾಸ ಕಳೆದುಕೊಂಡಿದೆ.

ಹೀಗಾದರೆ ಮುಂದಿನ ಪೀಳಿಗೆಯ ಗತಿಯೇನು ?

ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯ ಎರಡೂ ಇವುಗಳ ಮೇಲೆಯೇ ಅವಲಂಬಿತವಾಗಿವೆೆ. ಇದು ಎಷ್ಟು ಬೇಗ ಕಾರ್ಯರೂಪಕ್ಕೆ ಬಂದರೆ ಅಷ್ಟು ಒಳ್ಳೆಯದು.

ಅದಕ್ಕಾಗಿ ಪ್ರಯತ್ನ ನಮ್ಮೆಲ್ಲರದಾಗಲಿ ಎಂಬ ಆಶಿಸುತ್ತಾ....

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿ

 ವಿವೇಕಾನಂದ. ಎಚ್. ಕೆ., ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News