ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ಸಚಿವ ಜಾರ್ಜ್ ಚಾಲನೆ

Update: 2017-10-16 13:25 GMT

ಬೆಂಗಳೂರು, ಅ.16: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಎದುರಾಗುವ ಕುಂದು ಕೊರತೆಗಳಿಗೆ ಆನ್‌ಲೈನ್ ಮೂಲಕ ತತ್‌ಕ್ಷಣ ಸ್ಪಂದಿಸಲು ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದ್ದಾರೆ.

ಸೋಮವಾರ ನಗರದಲ್ಲಿರುವ ಬೆಂಗಳೂರು ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ ನವೀಕರಿಸಿರುವ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ನಗರದಲ್ಲಿ ಸಾರ್ವಜನಿಕರಿಗೆ ಎದರುರಾಗುವ ಸಮಸ್ಯೆಗಳಿಗೆ ಶೀಘ್ರದಲ್ಲಿ ಸ್ಪಂದಿಸಲು ಕೆಂದ್ರವನ್ನು ಸ್ಥಾಪಿಸಲಾಗಿದೆ ಎಂದರು.

ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಬಿಎಸ್‌ಡಬ್ಲೂಎಸ್‌ಎಸ್‌ಬಿ, ಬಿಡಿಎ, ಬಿಬಿಎಂಪಿ, ಬಿಎಂಆರ್‌ಸಿಎಲ್ ಸೇವೆಗಳಲ್ಲಿ ಕುಂದು ಕೊರತೆ, ಸಮಸ್ಯೆಗಳನ್ನು ನೇರವಾಗಿ ಈ ವಿಭಾಗಗಳ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಿಗೆ ದೂರುಗಳನ್ನು ಸಲ್ಲಿಸಬಹುದು.

ದೂರು ಸಲ್ಲಿಸಿದ ತಕ್ಷಣ ಸಂಬಂಧಪಟ್ಟ ವಿಭಾಗದ ನೋಡಲ್ ಅಧಿಕಾರಿಗೆ ರವಾನೆಯಾಗುತ್ತದೆ. ಈ ಅಧಿಕಾರಿ ವಲಯ ಎಂಜಿನಿಯರ್‌ಗೆ ಸಮಸ್ಯೆಯನ್ನು ನಿವಾರಣೆ ಮಾಡಲು ಸೂಚಿಸುತ್ತಾರೆ. ದೂರು ವಿಲೇವಾರಿ ಹಾಗೂ ವಿಳಂಬ ಕುರಿತು ದೂರುದಾರರಿಗೆ ಪ್ರತಿಕ್ರಿಯೆ ರವಾನಿಸಲಾಗುತ್ತದೆ ಎಂದರು.

ಕೆಂದ್ರದ ಮೇಲೆ ಒತ್ತಡ ತನ್ನಿ: ನಗರದಲ್ಲಿ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆ ಗುಂಡಿಗಳು ಬಿದ್ದಿವೆ. ಕೇವಲ ರಾಜ್ಯ ಸರಕಾರ ಮತ್ತು ಬಿಬಿಎಂಪಿಯನ್ನು ದೂರುವುದು ಸರಿಯಲ್ಲ. 117 ವರ್ಷ ಬಳಿಕ ಸುರಿದಿರುವ ದಾಖಲೆಯ ಮಳೆಗೆ ಪಾಲಿಕೆಗೆ ಸುಮಾರು 1,665 ಕೋಟಿ ರೂ ನಷ್ಟವಾಗಿದೆ. ಮಳೆಯಿಂದ ನಗರದಲ್ಲಿ ಸಾರ್ವಜನಿಕರಿಗೆ ಎದುರಾಗಿರುವ ಅವಾಂತರಗಳಿಗೆ ಕೇಂದ್ರ ಸರಕಾರ ಸ್ಪಂದಿಸಲು ಒತ್ತಡ ತರಬೇಕು ಎಂದು ಹೇಳಿದರು.

15 ದಿನಗಳಲ್ಲಿ ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಈಗಾಗಲೇ 24 ಸಾವಿರ ರಸ್ತೆಗುಂಡಿಗಳಲ್ಲಿ 12 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ವಿರಾಮಕೊಟ್ಟ ತಕ್ಷಣ ಉಳಿದಿರುವ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಭರವಸೆ ಕೊಟ್ಟರು.

ಸ್ಥಳಾಂತರಕ್ಕೆ ಚಿಂತನೆ: ನಗರದಲ್ಲಿ ರಾಜಕಾಲುವೆ ಬದಿಯಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಸ್ಥಳಾಂತರಿಸಲು ಚಿಂತಿಸಲಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕ ರಾಜಕಾಲುವೆ ಬದಿಯಲ್ಲಿರುವವರನ್ನು ಸ್ಥಳಾಂತರಿಸಲಾಗುವುದು. ಇವರಿಗಾಗಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ಶೀರ್ಘದಲ್ಲಿ ವಸತಿ ಸಚಿವರ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News