ತುಳು ಭಾಷೆಯನ್ನು 8 ನೆ ಪರಿಚ್ಚೇದಕ್ಕೆ ಸೇರಿಸಲು ಆಗ್ರಹ

Update: 2017-10-16 13:28 GMT

ಬೆಂಗಳೂರು, ಅ.16 : ತುಳು ಭಾಷೆಯನ್ನು ಸಂವಿಧಾನದ 8 ನೆ ಪರಿಚ್ಚೇದಕ್ಕೆ ಸೇರ್ಪಡೆ ಮಾಡಬೇಕು ಎಂದು 8 ನೆಯ ಪರಿಚ್ಚೇದಕ್ಕೆ ತುಳು ಭಾಷೆ ಸೇರ್ಪಡೆ ಹೋರಾಟ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡ ಡಾ.ಉದಯ ಧರ್ಮಸ್ಥಳ, ತುಳು ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು ಎಂದು ಹಲವು ವಿದ್ವಾಂಸರು, ಸಂಶೋಧಕರು ತಿಳಿಸಿದ್ದಾರೆ. ಪ್ರಾಚೀನ ಗ್ರಂಥ ‘ಸಂಗಮ್’ ಸಾಹಿತ್ಯದಲ್ಲಿಯೂ ತುಳುವಿನ ಪ್ರಸ್ತಾಪವಿದೆ. ತುಳುನಾಡು ಅಂದಿನಿಂದ ಇಂದಿನವರೆಗೂ ತನ್ನ ಪ್ರಾದೇಶಿಕ ಗಟ್ಟಿತನದಿಂದ ಮೆರೆಯುತ್ತಿದೆ ಎಂದು ಹೇಳಿದರು.

 ತುಳುವನ್ನು ದೇಶದ ಒಕ್ಕೂಟದ ಪದ್ಧತಿಯಲ್ಲಿ ಇರುವ ಕರ್ನಾಟಕ ರಾಜ್ಯದ ಸರಕಾರ, ಪ್ರಾದೇಶಿಕ ಭಾಷೆ ಎಂದು ತಿರಸ್ಕರಿಸದೆ, ಅದೊಂದು ಪ್ರಭಾವಿ ಭಾಷೆ, ಸಂಸ್ಕೃತಿ ಎಂದು ಪರಿಗಣಿಸಬೇಕು. ಅಲ್ಲದೆ, ರಾಜ್ಯ ಸರಕಾರ ತುಳು ಭಾಷೆಯನ್ನು ಅಧಿಕೃತ ಭಾಷೆ ಎಂದು ಮಾನ್ಯತೆ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಸಂವಿಧಾನದಲ್ಲಿ ಭಾಷೆಯನ್ನು ಸೇರ್ಪಡೆ ಮಾಡುವುದರಿಂದ ತುಳು ಸಾಹಿತ್ಯ, ಚಲನ ಚಿತ್ರ ರಂಗ, ಜಾನಪದ ಸಂಸ್ಕೃತಿ, ಸಂಶೋಧನೆ ಸೇರಿದಂತೆ ಮತ್ತಿತರೆ ವಿಷಯಗಳಲ್ಲಿ ಭಾಷೆಗಳ ಸಮಾನವಾಗಿ ತುಳುವನ್ನು ಪರಿಗಣಿಸುವಂತಾಗಬೇಕು. ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಇನ್ನಿತರೆ ಸಂದರ್ಭಗಳಲ್ಲಿ ತುಳುವಿಗೆ ಸಿಗಬೇಕಾದ ಸ್ಥಾನಮಾನ, ಪ್ರಶಸ್ತಿ-ಪುರಸ್ಕಾರಗಳು ಅನಿವಾರ್ಯವಾಗುತ್ತದೆ. ಶ್ರೇಷ್ಠತೆಯನ್ನು ಪರಿಗಣಿಸುವಾಗ ತುಳುವನ್ನು ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News