ಕೈಗಾರೀಕರಣ ನ್ಯಾಯಾಲಯ ತೀರ್ಪು ಜಾರಿ ಮಾಡಲು ಆಗ್ರಹ

Update: 2017-10-16 13:31 GMT

ಬೆಂಗಳೂರು, ಅ.16: ವೇತನ ಹೆಚ್ಚಳ, ತುಟ್ಟಿ ಭತ್ತೆ, ಪಿಎಫ್, ಇಎಸ್‌ಐ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೈಗಾರೀಕರಣ ನ್ಯಾಯಾಲಯ ನೀಡಿರುವ ತೀರ್ಪನ್ನು ರಾಜ್ಯ ಸರಕಾರ ಕೂಡಲೇ ಜಾರಿ ಮಾಡಬೇಕು ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತಸುಬ್ಬಾರಾವ್, ಕಳೆದ 2003 ರಲ್ಲಿ ಹೈಕೋರ್ಟ್ ಆಡಳಿತ ವರ್ಗ ಸಾರಿಗೆ ಕಾರ್ಮಿಕರ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ, ಆಡಳಿತ ವರ್ಗ ಮತ್ತೆ ಕಾರ್ಮಿಕರ ವಿರೋಧಿ ನೀತಿ ಅನುಸರಿಸಿದ್ದರಿಂದ, ಇದನ್ನು ವಿರೋಧಿಸಿ ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಲಾಗಿತ್ತು. ಅನಂತರ ಅದನ್ನು 2005 ರಲ್ಲಿ ಔದ್ಯಮಿಕ ನ್ಯಾಯಾಧೀಕರಣಕ್ಕೆ ವರ್ಗಾವಣೆ ಮಾಡಲಾಗಿತ್ತು ಎಂದು ಹೇಳಿದರು. ಕಳೆದ 12 ವರ್ಷಗಳಿಂದ ರಾಜಿಯಿಲ್ಲದೆ ಸತತವಾದ ಹೋರಾಟದ ಪ್ರತಿಫಲವಾಗಿ ನ್ಯಾಯಾಧೀಕರಣ ಸಾಕ್ಷಿ, ಆಧಾರಗಳನ್ನು ಪರಿಶೀಲಿಸಿ ಕಳೆದ ಆ.29 ರಂದು ಐತೀರ್ಪು ನೀಡಿ ನೌಕರರ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸುವಂತೆ ನಿರ್ದೇಶನ ನೀಡಿದೆ. ಹೀಗಾಗಿ, ಕೂಡಲೇ ರಾಜ್ಯ ಸರಕಾರ ಅದನ್ನು ಜಾರಿ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
2004 ರಿಂದ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮೂಲ ವೇತನ ಮತ್ತು ತುಟ್ಟಿ ಭತ್ತೆಯನ್ನು ಶೇ.15 ರಷ್ಟು ಹೆಚ್ಚಳ ಮಾಡಬೇಕು. 2003 ರಂದು ಪೂರ್ಣಗೊಂಡಿರುವ ಸೇವೆಯ ಪ್ರತಿ ವರ್ಷಕ್ಕೂ 20 ರೂ.ಗಳು ಸೇವಾ ವೈಟೇಜ್ ನೀಡಬೇಕು. ಭತ್ತೆ ಮತ್ತು ಬಾಟಾವನ್ನು ಶೇ.2 ರಷ್ಟು ಜಾಸ್ತಿ ಮಾಡಬೇಕು. ಹಬ್ಬದ ಮುಂಗಡವಾಗಿ 5 ಸಾವಿರ ನೀಡಬೇಕು. ಅದನ್ನು 10 ಸಮಾನ ಕಂತುಗಳಲ್ಲಿ ಹಿಡಿದುಕೊಳ್ಳಬೇಕು. ಬಟ್ಟೆ ಹೊಲಿಗೆಗಾಗಿ ಒಂದು ಸೆಟ್‌ಗೆ 250 ಹಾಗೂ ಮಹಿಳೆಯರ ರವಿಕೆಗೆ 50 ರೂ.ಗಳು ಹೆಚ್ಚುವರಿಯಾಗಿ ನೀಡಬೇಕು.
ಸಮರ್ಪಕವಾದ ಇಎಸ್‌ಐ ಸೌಲಭ್ಯಗಳು ಒದಗಿಸಬೇಕು. ಜೊತೆಗೆ ಆರೋಗ್ಯ ವಿಮಾ ಯೋಜನೆಯಡಿ ವೈದ್ಯಕೀಯ ಸೌಲಭ್ಯಗಳು ನೀಡಲು ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು 200 ರೂ.ಗಳಂತೆ ಮನೆಯಲ್ಲಿ ಚಿಕಿತ್ಸೆ ಪಡೆಯಲು ಹಣ ನೀಡಬೇಕು. ಉತ್ತಮವಾದ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಕಾರ್ಮಿಕರಿಗೆ 1:3 ಅನುಪಾತದಲ್ಲಿ ವಿದ್ಯಾನಿಧಿ ನೀಡಬೇಕು. ಒಟ್ಟು ವೇತನದ ಶೇ.10 ರಷ್ಟು ಮೊತ್ತವನ್ನು ಅಪಘಾತ ಪರಿಹಾರವಾಗಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News