×
Ad

ಚಿಕ್ಕಬನಹಳ್ಳಿ ಕಾಲನಿ ಸಂಪೂರ್ಣ ಜಲಾವೃತ : ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

Update: 2017-10-16 20:39 IST

ಬೆಂಗಳೂರು, ಅ.16: ಬೆಂಗಳೂರು ಪೂರ್ವ ತಾಲೂಕು ಮಹದೇವಪುರ ಕ್ಷೇತ್ರದ ದೊಡ್ಡಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಿಕ್ಕಬನಹಳ್ಳಿ ಕಾಲನಿಯು ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿದ್ದು, ಸಾವಿರಾರು ಮಂದಿ ಬೀದಿ ಪಾಲಾಗುವ ಆತಂಕದಲ್ಲಿದ್ದಾರೆ.

ರಾಜ್ಯ ಸರಕಾರವು ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಹಾಗೂ ಬಿಬಿಎಂಪಿ ಸದಸ್ಯ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಚಿಕ್ಕಬನಹಳ್ಳಿ ಕಾಲನಿಯ ಸಂತ್ರಸ್ತರು ಬೆಂಗಳೂರು ಪೂರ್ವ ತಾಲೂಕು ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಚಿಕ್ಕಬನಹಳ್ಳಿ ಕಾಲನಿಯಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದಿರುವಂತಹ ದಲಿತರು ಹಾಗೂ ಅಲ್ಪಸಂಖ್ಯಾತರೆ ಹೆಚ್ಚಿನ ಪ್ರಮಾಣದಲ್ಲಿದ್ದು, ಮಳೆಯ ಅವಾಂತರದಿಂದಾಗಿ ಹಲವಾರು ಮಂದಿ ಈಗಾಗಲೆ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಇಡೀ ಕಾಲನಿ ಜಲಾವೃತಗೊಂಡಿದ್ದು ಸುಮಾರು 3-4 ಅಡಿಗಳಷ್ಟು ನೀರು ನಿಂತಿರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಮಳೆ ನೀರಿನೊಂದಿಗೆ ಮನೆಗಳ ಒಳಗೆ ಹಾವುಗಳು ಸೇರಿದಂತೆ ವಿಷಕಾರಕ ಜಂತುಗಳು ನುಗ್ಗುತ್ತಿರುವುದರಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮನೆಗಳು ಕುಸಿದು ಬೀಳುತ್ತಿವೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ಚಿಕ್ಕಬನಹಳ್ಳಿ ಕಾಲನಿಯಲ್ಲಿ ಸಂಕಷ್ಟದಲ್ಲಿರುವ ಬಡವರನ್ನು ಕೂಡಲೆ ಸಮೀಪದಲ್ಲೆ ಸರಕಾರಿ ಜಾಗವನ್ನು ಗುರುತಿಸಿ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಗಂಜಿ ಕೇಂದ್ರವನ್ನು ಆರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ಗೆ ಸೂಚನೆ ನೀಡಿದರು.

9 ವರ್ಷಗಳ ಹಿಂದೆಯೆ ಚಿಕ್ಕಬನಹಳ್ಳಿ ಕಾಲನಿಯ ನಿವಾಸಿಗಳಿಗೆ ಬಿಡಿಎ ಹಾಗೂ ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ಮನೆಗಳನ್ನು ನಿರ್ಮಿಸಿಕೊಡುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ, ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ಕಡತವನ್ನೆ ನಾಪತ್ತೆ ಮಾಡಿದ್ದಾರೆ ಎಂದು ಅರವಿಂದ ಲಿಂಬಾವಳಿ ಕಿಡಿಗಾರಿದರು.

ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ತೇಜಸ್‌ಕುಮಾರ್, ಬಡವರಿಗೆ ತಾತ್ಕಾಲಿಕವಾಗಿ 3 ಎಕರೆ ಜಾಗದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಅಲ್ಲದೆ, ಗಂಜಿ ಕೇಂದ್ರವನ್ನು ತೆರೆಯಲಾಗುವುದು. ಈ ಹಿಂದೆ ಬಿಡಿಎ ಮೂಲಕ ಇವರಿಗೆ ಮನೆಗಳನ್ನು ಕಟ್ಟಿಸಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಗಿರುವ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆದುಕೊಂಡು ಶಾಶ್ವತವಾಗಿ ಇವರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ವೀಣಾ ರಮೇಶ್, ಮಂಜುನಾಥ್, ಮುಖಂಡರಾದ ಪಾಪಣ್ಣ, ನಟರಾಜು, ಧನಂಜಯ, ಶಿವಕುಮಾರ್, ಕೆಂಪೇಗೌಡ, ವೆಂಟೇಶ್ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News