ಜರ್ಮನಿ, ಅಮೆರಿಕ ಕ್ವಾರ್ಟರ್‌ ಫೈನಲ್‌ಗೆ

Update: 2017-10-16 18:41 GMT

ಹೊಸದಿಲ್ಲಿ, ಅ.16: ಕೊಲಂಬಿಯಾ ವಿರುದ್ಧ 4-0 ಗೋಲುಗಳ ಅಂತರದಿಂದ ಜಯ ದಾಖಲಿಸಿರುವ ಜರ್ಮನಿ ತಂಡ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಜರ್ಮನಿ ನಾಯಕ ಜಾನ್ ಪೀಟ್ ಆರ್ಪ್ ಅವಳಿ ಗೋಲು ಬಾರಿಸಿ ತಂಡದ ಭರ್ಜರಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

ಜರ್ಮನಿ ಅಂತಿಮ-8ರ ಸುತ್ತಿನಲ್ಲಿ ಬ್ರೆಝಿಲ್ ಅಥವಾ ಹೊಂಡುರಾಸ್ ತಂಡವನ್ನು ಎದುರಿಸಲಿದೆ.

ಇಲ್ಲಿನ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಿ 7 ನಿಮಿಷ ಕಳೆಯುವಷ್ಟರಲ್ಲಿ ಜರ್ಮನಿ 1-0 ಮುನ್ನಡೆ ಸಾಧಿಸಿತು. ಜರ್ಮನಿಯ ಸ್ಟಾರ್ ಆಟಗಾರ ಜಾನ್ ಪೀಟ್ ಆರ್ಪ್ ಕೊಲಂಬಿಯಾದ ಗೋಲ್‌ಕೀಪರ್ ಕೇವಿನ್ ಮಿಯೆರ್‌ರನ್ನು ವಂಚಿಸಿ ಮೊದಲ ಗೋಲು ಬಾರಿಸಿದರು.

ಯಾನ್ ಬಿಸ್ಸೆಕ್ 39ನೆ ನಿಮಿಷದಲ್ಲಿ ಗೋಲು ಬಾರಿಸಿ ಜರ್ಮನಿಗೆ 2-0 ಮುನ್ನಡೆ ಒದಗಿಸಿಕೊಟ್ಟರು.

49ನೆ ನಿಮಿಷದಲ್ಲಿ ಆರ್ಪ್ ನೀಡಿದ ಪಾಸ್ ನೆರವಿನಿಂದ ಜಾನ್ ಯೆಬೊಹ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಜರ್ಮನಿ ತಂಡದ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು.

ಜರ್ಮನಿ ನಾಯಕ ಆರ್ಪ್ 65ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ 4-0 ಅಂತರದ ಗೆಲುವಿಗೆ ನೆರವಾದರು. ಜರ್ಮನಿಯ ವಿಂಗರ್ ಡೆನ್ನಿಸ್ ಜಾಸ್ಟರ್‌ಝೆಂಬ್‌ಸ್ಕಿ ಹಳದಿ ಕಾರ್ಡ್ ಪಡೆದ ಕಾರಣ ರವಿವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ.

ಅಮೆರಿಕ ಅಂತಿಮ-8ರ ಘಟ್ಟಕ್ಕೆ ಲಗ್ಗೆ

ಟಿಮ್ ವೈಹ್ ಹ್ಯಾಟ್ರಿಕ್

ಹೊಸದಿಲ್ಲಿ, ಅ.16: ಟಿಮ್ ವೈಹ್ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಅಮೆರಿಕ ತಂಡ ಅಂಡರ್-17 ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪರಾಗ್ವೆ ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸಿತು. ಈ ಗೆಲುವಿನ ಮೂಲಕ ಅಂತಿಮ-8ರ ಸುತ್ತಿಗೆ ತೇರ್ಗಡೆಯಾಯಿತು.

 ಸೋಮವಾರ ನಡೆದ ಪಂದ್ಯದಲ್ಲಿ ಟಿಮ್ 19ನೆ ನಿಮಿಷದಲ್ಲಿ ಆ್ಯಂಡ್ರೂ ಕಾರ್ಲೆಟನ್ ಹಾಗೂ ಅಯೊ ಅಕಿನೊಲಾ ನೆರವಿನಿಂದ ಟೂರ್ನಿಯಲ್ಲಿ ಮೊದಲ ಬಾರಿ ಗೋಲು ಬಾರಿಸಿ ಅಮೆರಿಕಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಟಿಮ್ 53ನೆ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿ ಅಮೆರಿಕದ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು. ಆ್ಯಂಡ್ರೂ ಕಾರ್ಲೆಟನ್ 63ನೆ ನಿಮಿಷದಲ್ಲಿ ಗೋಲು ಬಾರಿಸಿ ಅಮೆರಿಕ 3-0 ಮುನ್ನಡೆ ಒದಗಿಸಿದರು. ನಾಯಕ ಜೋಶ್ ಸಾರ್ಜೆಂಟ್ 74ನೆ ನಿಮಿಷದಲ್ಲಿ ಅಮೆರಿಕದ ಮುನ್ನಡೆಯನ್ನು 4-0ಗೆ ವಿಸ್ತರಿಸಿದರು.

77ನೆ ನಿಮಿಷದಲ್ಲಿ ಗೋಲು ಬಾರಿಸಿದ ಟಿಮ್ ಅಮೆರಿಕ ತಂಡ 5-0 ಅಂತರದಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಲು ನೆರವಾದರು. ಶನಿವಾರ ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ ಇಂಗ್ಲೆಂಡ್ ಅಥವಾ ಜಪಾನ್‌ನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News