ಅಫ್ಘಾನ್: ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿ

Update: 2017-10-17 16:53 GMT

ಕಾಬೂಲ್, ಅ 17. ಆಗ್ನೇಯ ಅಫ್ಘಾನಿಸ್ತಾನದಲ್ಲಿರುವ ಪೊಲೀಸ್ ತರಬೇತಿ ಕೇಂದ್ರವೊಂದರ ಮೇಲೆ ಮಂಗಳವಾರ ನಡೆದ ಆತ್ಮಹತ್ಯಾ ಮತ್ತು ಬಂದೂಕು ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೃತರಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಪೊಲೀಸರು ಸೇರಿದ್ದಾರೆ ಎಂದು ಪಕ್ತಿಯ ಪ್ರಾಂತದ ರಾಜಧಾನಿ ಗರ್ದೇಝ್‌ನ ವೈದ್ಯಕೀಯ ಅಧಿಕಾರಿಯೊಬ್ಬರು ತಿಳಿಸಿದರು.

‘‘ಮೊದಲು, ತರಬೇತಿ ಶಿಬಿರದ ಸಮೀಪ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಕಗಳಿಂದ ತುಂಬಿದ್ದ ಕಾರೊಂದನ್ನು ಸ್ಫೋಟಿಸಿದನು. ಆಗ ಒಳನುಗ್ಗಿದ ಹಲವಾರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದರು’’ ಎಂದು ಆಂತರಿಕ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ತರಬೇತಿ ಕೇಂದ್ರದ ಒಳಗೆ ಬಂದೂಕುಗಳು ಮತ್ತು ಆತ್ಮಹತ್ಯಾ ದಿರಿಸುಗಳಿಂದ ಸಜ್ಜಿತರಾಗಿರುವ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸಂಜೆಯವರೆಗೂ ಕಾಳಗ ನಡೆಯುತ್ತಿತ್ತು.

ಪೊಲೀಸ್ ತರಬೇತಿ ಕೇಂದ್ರವು ಪಕ್ತಿಯ ಪೊಲೀಸ್ ಪ್ರಧಾನಕಚೇರಿಯ ಸಮೀಪದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News