ಭಾರತದ ಮಕ್ಕಳ ಬೊಜ್ಜು ಸಮಸ್ಯೆಗೆ ನೈಜ ಕಾರಣವೇನು?

Update: 2017-10-17 18:43 GMT

ಲಂಡನ್‌ನ ಇಂಪೀರಿಯಲ್ ಕಾಲೇಜ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಒಂದು ಹೊಸ ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತೀ 50 ಮಕ್ಕಳಲ್ಲಿ ಒಂದು ಮಗು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದೆ. ಈಗ ಉಲ್ಬಣಗೊಳ್ಳುತ್ತಿರುವ ಈ ಸಮಸ್ಯೆಗೆ, ಮಕ್ಕಳಿಗೆ ಸುಲಭವಾಗಿ ಸಿಗುತ್ತಿರುವ ಫುಡ್ ಮತ್ತು ಚಟುವಟಿಕೆಗಳಿಲ್ಲದ ಜೀವನ ಶೈಲಿಗಳಷ್ಟೇ ಕಾರಣವಾಗಿರಲಾರದು. ಬದಲಾಗಿ, ಆ ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ತಾಯಂದಿರ ಗರ್ಭದಲ್ಲಿ ಇರುವಾಗಿನ ತಾಯಂದಿರ ಸ್ಥಿತಿಯೇ ಮೂಲ ಕಾರಣವಿರಬಹುದು.

ಭಾರತದ ಬೊಜ್ಜು ಸಮಸ್ಯೆ ತೀರ ಇತ್ತೀಚಿನದು ಮತ್ತು ಈಗ ಕೂಡ ವಿಶ್ವದಲ್ಲಿ ಅತೀ ಕಡಿಮೆ ಬೊಜ್ಜುದರಗಳಿರುವ ದೇಶ ಭಾರತ. ಆದರೆ ಇದು ತೀವ್ರಗೊಳ್ಳುತ್ತಿರುವ ಒಂದು ಕಾಯಿಲೆ ಇರಬಹುದು. ಯಾಕೆಂದರೆ, 1975ರಲ್ಲಿ ಹುಡುಗರು ಮತ್ತು ಹುಡುಗಿಯರಲ್ಲಿ ಬೊಜ್ಜು ಬಹುಮಟ್ಟಿಗೆ ಶೂನ್ಯವೆಂದು ಅಂದಾಜಿಸಲಾಗಿತ್ತು. ಆದ್ದರಿಂದ 40 ವರ್ಷಗಳ ಹಿಂದೆ ಅಪರೂಪವಾಗಿದ್ದ ಒಂದು ಸಮಸ್ಯೆ ಈಗ ಭಾರತದಲ್ಲಿ ಅಂದಾಜು 50 ಮಕ್ಕಳಲ್ಲಿ ಒಂದು ಮಗುವನ್ನು ಕಾಡುತ್ತಿದೆ ಎಂದಿದ್ದಾರೆ ಲಂಡನ್‌ನ ಇಂಪೀರಿಯಲ್ ಕಾಲೇಜಿನ ಡಾ.ಜೇಮ್ಸ್ ಬೆಂತಮ್.

ಬೆಂತಮ್ ಮತ್ತು ಅವರ ತಂಡ 200 ದೇಶಗಳಿಂದ ಆಯ್ದ 24,016 ಜನಸಂಖ್ಯೆ ಆಧಾರಿತ ಅಧ್ಯಯನಗಳನ್ನು ಕ್ರೋಡೀಕರಿಸಿ, ಭಾರತವೂ ಸೇರಿದಂತೆ ಆ 200 ದೇಶಗಳ ಅಂಡರ್‌ವೈಟ್, ಒವರ್‌ವೈಟ್ ಮತ್ತು ಒಬಿಸಿಟಿಯ ಮಟ್ಟವನ್ನು ಅಂದಾಜಿಸಿದರು. 1975 ಮತ್ತು 2016ರ ನಡುವಿನ ಅವಧಿಯಲ್ಲಿ ನಡೆಸಲಾದ ಈ ಅಧ್ಯಯನದ ಫಲಿತಾಂಶಗಳನ್ನು ‘ದಿ ಲಾನ್ಸೆಟ್’ನಲ್ಲಿ ಪ್ರಕಟಿಸಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

ಬಡತನ ಮತ್ತು ಪೌಷ್ಟಿಕಾಹಾರದ ಅಲಭ್ಯತೆಗೆ ಸಂಬಂಧಿಸಿ ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಹಾರ ದೊರಕದಿರುವ (ಅಂಡರ್ ನ್ಯೂಟ್ರಿಶನ್) ಸಮಸ್ಯೆ ಭಾರತದಲ್ಲಿ ಬಹಳ ಸಮಯದಿಂದ ಇದೆ. 2016ರಲ್ಲಿ ಕೂಡ, ಸಮೀಕ್ಷೆಯ ಪ್ರಕಾರ, ದೇಶದ ಒಟ್ಟು ಹೆಣ್ಣು ಮಕ್ಕಳಲ್ಲಿ ಶೇ.22 ಮತ್ತು ಗಂಡು ಮಕ್ಕಳಲ್ಲಿ ಶೇ.30 ಮಕ್ಕಳು ಸುಮಾರಾಗಿ ಅಥವಾ ತೀವ್ರವಾಗಿ ಕಡಿಮೆ ತೂಕ (ಅಂಡರ್ ವೈಟ್) ಹೊಂದಿದ್ದರು. (ಇದು ಅಧ್ಯಯನದಲ್ಲಿ ಒಳಗೊಂಡ ದೇಶಗಳಲ್ಲೆ ಅತ್ಯಂತ ಹೆಚ್ಚು ಪ್ರಮಾಣದ ಅಂಡರ್ ವೈಟ್)

ಡಿ.ಬಾರ್ಕರ್ ಊಹೆ
ಬ್ರಿಟಿಷ್ ಸಾಂಕ್ರಾಮಿಕ ರೋಗ ತಜ್ಞ ಡೇವಿಡ್ ಬಾರ್ಕರ್ 1990ರಲ್ಲಿ ಪ್ರತಿಪಾದಿಸಿದ ಸಿದ್ಧಾಂತವು, ಗರ್ಭದೊಳಗಿರುವಾಗ ಭ್ರೂಣದ ಬೆಳವಣಿಗೆ, ಜನಿಸುವಾಗ ಮಗು ನಿಗದಿತ ತೂಕಕ್ಕಿಂತ ಕಡಿಮೆ ತೂಕ ಹೊಂದಿರುವುದು ಮತ್ತು ಅವಧಿಪೂರ್ವ (ಪ್ರಿಮೆಚೂರ್) ಜನನಕ್ಕೂ ಹೈಪರ್‌ಟೆನ್ಶನ್‌ನ ಮೂಲಕ್ಕೂ, ರಕ್ತನಾಳ ಸಂಬಂಧಿ ಹೃದಯರೋಗಕ್ಕೂ ಮತ್ತು ಇನ್ಸುಲಿನ್ ಆಧಾರಿತವಲ್ಲದ ಮಧುಮೇಹ ಕಾಯಿಲೆಗೂ ಸಂಬಂಧವಿದೆ ಎಂದು ಹೇಳುತ್ತದೆ.

ಹೈದರಾಬಾದ್‌ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್‌ನ ಡಾ.ಎ.ಲಕ್ಷ್ಮಯ್ಯ ಹೇಳುವಂತೆ, ‘‘ಅಂಡರ್ ನ್ಯೂಟ್ರಿಶನ್ ಮತ್ತು ಒಬಿಸಿಟಿಗೂ ಹೆರಿಗೆ ಅಥವಾ ಗರ್ಭಿಣಿ ತಾಯಿಯ ಪೌಷ್ಟಿಕಾಹಾರದ ಕೊರತೆಗೂ ಸಂಬಂಧವಿದೆ. ಇವರ ಅಭಿಪ್ರಾಯಗಳು ಭಾಗಶಃ ಬಾರ್ಕರ್ ಸಿದ್ಧಾಂತವನ್ನೇ ಆಧರಿಸಿವೆ.’’

2014-15ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ನಾಲ್ಕನೆಯ ಸುತ್ತಿನ ಪ್ರಕಾರ, ಭಾರತದ ಒಟ್ಟು ಮಹಿಳೆಯರಲ್ಲಿ ಸುಮಾರು ಶೇ.23 ಮಹಿಳೆಯರು ಅಂಡರ್‌ವೈಟ್ ವರ್ಗಕ್ಕೆ ಸೇರಿದವರಾಗಿದ್ದು, ಅವರ ಬಾಡಿಮಾಸ್ ಸೂಚ್ಯಂಕಗಳು ಸಾಮಾನ್ಯ (ನಾರ್ಮಲ್) ಮಟ್ಟಕ್ಕಿಂತ ಕಡಿಮೆ ಇವೆ. ಗರ್ಭಿಣಿಯರಲ್ಲಿ (15ರಿಂದ 49ರ ನಡುವಣ ವಯೋಮಾನದವರು), ಸುಮಾರು ಶೇ.50 ಮಂದಿ ರಕ್ತಹೀನತೆಯಿಂದ (ಅನೀಮಿಯಾ) ಬಳಲುತ್ತಿದ್ದಾರೆ ಮತ್ತು ಅನೀಮಿಯಾ, ಜಾಗತಿಕವಾಗಿ ಪೌಷ್ಟಿಕಾಂಶ ಕೊರತೆಗಳಲ್ಲಿ ಅತ್ಯಂತ ಸಾಧಾರಣವಾಗಿ, ಅತ್ಯಂತ ವ್ಯಾಪಕವಾಗಿ ಇರುವ ಒಂದು ಕೊರತೆಯಾಗಿದೆ.

ಮುಂಬೈಯ ಲೋಕಮಾನ್ಯ ತಿಲಕ್ ಮುನ್ಸಿಪಲ್ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ.ಅಲ್ಕಾ ಜಾಧವ್ ಹೇಳುತ್ತಾರೆ, ‘‘ಸಾಕಷ್ಟು ಪೌಷ್ಟಿಕಾಹಾರ ಸಿಗದ ಒಬ್ಬಳು ತಾಯಿ ಒಂದು ಅಪೌಷ್ಟಿಕ ಶಿಶುವಿಗೆ ಜನ್ಮ ನೀಡುತ್ತಾಳೆ. ಈ ಕೊರತೆಯನ್ನು ತುಂಬುದ ಅವಸರದಲ್ಲಿ, (ಬೃಹತ್ ಪ್ರಮಾಣದ ಕ್ಯಾಲರಿಗಳನ್ನು ಪೂರೈಸುವಾಗ) ಅದು ಅತಿಯಾದ ಪೌಷ್ಟಿಕತೆಗೆ ಕಾರಣವಾಗಬಲ್ಲದು. ಇದನ್ನೇ ಬಾರ್ಕರ್‌ರವರ ಸಿದ್ಧಾಂತ ಪ್ರತಿಪಾದಿಸುವುದು. ಆದರೆ ಇದನ್ನು ಸಾಬೀತುಪಡಿಸುವುದು ಕಷ್ಟ.

ಜಂಕ್ ಫುಡ್ ಸಮಸ್ಯೆ
ಮುನಿಸಿಪಾಲಿಟಿ ಆಸ್ಪತ್ರೆಯಲ್ಲಿ ಜಾಧವ್ ಒಂದು ಬೊಜ್ಜು (ಒಬಿಸಿಟಿ) ಚಿಕಿತ್ಸಾಲಯ ನಡೆಸುತ್ತಿದ್ದಾರೆ. ಬಡ ಕುಟುಂಬಗಳಿಂದ ಬರುವ ಮಕ್ಕಳು ಸದಾ ಬೊಜ್ಜಿನ ಸಮಸ್ಯೆಯಿಂದ ಬಳಲುವುದು ಕಂಡು ಬಂದದ್ದರಿಂದ ಅವರು ಈ ಚಿಕಿತ್ಸಾಲಯವನ್ನು ಆರಂಭಿಸಬೇಕಾಯಿತು. ಆ ಮಕ್ಕಳು ಬೊಜ್ಜಿಗೆ ಸಂಬಂಧವಿರುವ ಹೈಪರ್ ಟೆನ್ಶನ್ ಮತ್ತು ಮಧುಮೇಹ ರೋಗದಿಂದ ಬಳಲುತ್ತಿದ್ದವು.

ಒಂದು ಮಗುವಿನ ಅಂಡರ್ ನ್ಯೂಟ್ರಿಶನ್‌ನಿಂದ ಬೊಜ್ಜಿಗೆ ಸಾಗುವ ಪ್ರಯಾಣದ ವೇಗವು ಸರಿಯಾದ ಆಹಾರವನ್ನು ತೆಗೆದುಕೊಳ್ಳದೆ ಇರುವುದರಿಂದ ಹೆಚ್ಚಾಗಬಹುದು. ಜನಿಸುವ ಮೊದಲೇ ಅಥವಾ ಶಿಶುಗಳಾಗಿರುವಾಗ ಅಂಡರ್‌ನರಿಶ್ಡ್ ಆದ ಮಕ್ಕಳು, ಅವುಗಳ ಮೊದಲ ಎರಡು ವರ್ಷಗಳಲ್ಲಿ ಅವುಗಳಿಗೆ ಸಮರ್ಪಕವಾದ ಪೌಷ್ಟಿಕಾಹಾರ ನೀಡಿದ್ದಲ್ಲಿ, ತಮ್ಮ ತೂಕ ಹೆಚ್ಚಿಸಿಕೊಂಡು ಇತರ ನಾರ್ಮಲ್ ಮಕ್ಕಳ ಹಾಗೆಯೇ ಬೆಳೆಯುತ್ತದೆ. ಆದರೆ ಸಮಸ್ಯೆ ಎಂದರೆ, ಅಂತಹ ಮಕ್ಕಳಿಗೆ ಹೆಚ್ಚಿನ ಕ್ಯಾಲರಿಗಳಿರುವ ಮತ್ತು ಸಕ್ಕರೆ (ಸಿಹಿ) ಇರುವ ಶಕ್ತಿಸಾಂದ್ರ ಆಹಾರವನ್ನು ನೀಡಲಾಗುತ್ತದೆ. ಪರಿಣಾಮವಾಗಿ ಅವುಗಳು ಬೊಜ್ಜು ಬೆಳೆಸಿಕೊಳ್ಳುತ್ತವೆ. ವಿಪರೀತ ದಪ್ಪ ಆಗುತ್ತವೆ. ಚೀಸ್ ಮತ್ತು ನೆಲಗಡಲೆ, ಬೆಣ್ಣೆ (ಪೀನಟ್ ಬಟರ್)ಯಂತಹ ಆಹಾರ ನೀಡಿದಾಗ ದೇಹದಲ್ಲಿ ಕೊಬ್ಬು ಶೇಖರವಾಗುತ್ತದೆ.

ಮಕ್ಕಳು ಬೆಳೆಯುವ ಪರಿಸರಗಳಲ್ಲಿ ದೈಹಿಕ ಚಟುವಟಿಕೆಗಳ ಕೊರತೆ ಇದ್ದಾಗಲಂತೂ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗುತ್ತದೆ.
‘‘ಪೌಷ್ಟಿಕಾಹಾರದ ಕೊರತೆ ಭಾರತದಲ್ಲಿ ಕಡಿಮೆಯಾಗುತ್ತಿದೆಯಾದರೂ ಅದು ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗುತ್ತಿಲ್ಲ. ಪ್ರತಿ ವರ್ಷ ಅದು ಶೇ.0.7ರಷ್ಟು ಕಡಿಮೆಯಾಗುತ್ತಿದೆ. 2035ರ ವೇಳೆಗೆ ಸಾಧಿಸಬೇಕಾಗಿರುವ ಪೌಷ್ಟಿಕಾಹಾರ ಸಂಬಂಧಿಯಾದ ಕೆಲವು ಗುರಿಗಳನ್ನು ಸಾಧಿಸಬೇಕಾದರೆ ಈ ದರವನ್ನು ವಾರ್ಷಿಕ ಶೇ.1.25ರಷ್ಟಕ್ಕೆ ಏರಿಸಬೇಕಾಗುತ್ತದೆ’’ ಎನ್ನುತ್ತಾರೆ ಲಕ್ಷ್ಮಯ್ಯ.

ಕೃಪೆ: scroll.in

Writer - ಪ್ರಿಯಾಂಕಾ ವೊರಾ

contributor

Editor - ಪ್ರಿಯಾಂಕಾ ವೊರಾ

contributor

Similar News