ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಡೆಸುತ್ತಿದ್ದ ವೈದ್ಯರ ಬಂಧನವನ್ನು ತಡೆದ ಬಿಜೆಪಿ ಶಾಸಕರು

Update: 2017-10-19 07:45 GMT

ಹೊಸದಿಲ್ಲಿ, ಅ.19: ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಡೆಸುತ್ತಿದ್ದ ವೈದ್ಯ ದಂಪತಿಯನ್ನು ಬಂಧಿಸಲು ಮುಂದಾದ ಪೊಲೀಸರನ್ನು ಇಬ್ಬರು ಬಿಜೆಪಿ ಶಾಸಕರು ತಡೆದಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.

ಕಾನೂನು ಬಾಹಿರವಾಗಿ ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಡೆಸುತ್ತಿದ್ದ ಆರೋಪದಲ್ಲಿ ಅಲಿಗಢದಲ್ಲಿ ಜೀವನ್ ನರ್ಸಿಂಗ್ ಹೋಂ ನಡೆಸುತ್ತಿರುವ ಡಾ. ಜಯಂತ್ ಶರ್ಮ ಮತ್ತು ಅವರ ಪತ್ನಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಆದರೆ ಈ ಸಂದರ್ಭ ಸ್ಥಳೀಯ ಬಿಜೆಪಿ ಶಾಸಕರಾದ ಸಂಜೀವ್ ರಾಜ ಹಾಗು ಅನಿಲ್ ಪರಾಶರ್‍ ಎಂಬವರು ಅಲಿಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹಿತ ಉನ್ನತ ಅಧಿಕಾರಿಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ವೈದ್ಯ ದಂಪತಿಯನ್ನು ಬಂಧಿಸದಂತೆ ತಡೆದಿದ್ದಾರೆ ಎನ್ನಲಾಗಿದೆ.

ರಾಜಸ್ಥಾನದ ಆರೋಗ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಕಾರ್ಯಾಚರಣೆ ನಡೆದಿತ್ತು. ಅಲಿಗಢದ ಸಮೀಪ ತಾನ ಕ್ರಾರ್ಸಿ ಪ್ರದೇಶದ ವಿಷ್ಣುಪುರಿಯ ಖಾಸಗಿ ಆಸ್ಪತ್ರೆಗೆ ದಾಳಿ ನಡೆಸಿದ್ದಾಗ ಈ ಕುರಿತ ವಿವರ ಲಭಿಸಿತ್ತು.

ಮಧ್ಯವರ್ತಿಗಳ ನೆರವಿನಲ್ಲಿ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆತಂದು ಜೀವನ್ ನರ್ಸಿಂಗ್ ಹೋಮ್‍ನಲ್ಲಿ ಲಿಂಗ ನಿರ್ಣಯ ತಪಾಸಣೆ ನಡೆಸುತ್ತಿರುವುದನ್ನು  ಅರಿತ ರಾಜಸ್ಥಾನದ ಅಧಿಕಾರಿಗಳು ನರ್ಸಿಂಗ್ ಹೋಮ್ ಮತ್ತು ವೈದ್ಯ ದಂಪತಿಯ ಮೇಲೆ ನಿಗಾ ಇರಿಸಿದ್ದರು. ಗರ್ಭಿಣಿ ಮಹಳೆ ನರ್ಸಿಂಗ್ ಹೋಮ್‍ಗೆ ತಲುಪಿದ ಕೂಡಲೇ ರಾಜಸ್ಥಾನದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವೈದ್ಯರು ತಪಾಸಣೆಗೆ ಸಿದ್ಧಪಡಿಸಿದ ಸಾಮಗ್ರಿಗಳನ್ನು ವಶಕ್ಕೆಪಡೆದು ಸ್ಥಳೀಯ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು. 

ಈ ವಿಷಯ ತಿಳಿದ ಇಬ್ಬರು ಶಾಸಕರು ಠಾಣೆಗೆ ಆಗಮಿಸಿ ಅಧಿಕಾರಿಗಳು ಸುಳ್ಳು ಕೇಸು ಹಾಕಿದ್ದಾರೆ ಎಂದು ಆರೋಪಿಸಿದ್ದರು. ವೈದ್ಯ ದಂಪತಿಯನ್ನು ಬಿಡುಗಡೆಗೊಳಿಸಿದ ಪೊಲೀಸರು ಮಧ್ಯವರ್ತಿಯನ್ನು ಬಂಧಿಸಿದ್ದಾರೆ. ಡಾ. ಜಯಂತ್ ಶರ್ಮರ ತಂದೆ ಬಿಎಂಎಸ್‍ನ ಹಿರಿಯ ನಾಯಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News