ಬಿಜೆಪಿ ಆಡಳಿತದ ರಾಜ್ಯಗಳು ಕೇರಳದ ಮಾನವ ಅಭಿವೃದ್ಧಿ ಸೂಚ್ಯಂಕದ ಹತ್ತಿರಕ್ಕಾದರೂ ಬಂದಿದೆಯೇ?

Update: 2017-10-19 09:20 GMT

ತಿರುವನಂತಪುರ,ಅ.19 : ತಮ್ಮ ರಾಜ್ಯಕ್ಕೆ ಬಿಜೆಪಿ ಅಥವಾ ಆರೆಸ್ಸೆಸ್ಸಿನಿಂದ ಕಲಿಯಲು ಏನೂ ಇಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮನ್ನು ಚರ್ಚೆಗೆ ಆಹ್ವಾನಿಸಿದ ಮರುದಿನವೇ ಪಿಣರಾಯಿ ಅವರಿಂದ ಈ ಹೇಳಿಕೆ ಬಂದಿದೆ. ಮಂಗಳವಾರ ಜನ ರಕ್ಷಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾ ತಮ್ಮ ಪಕ್ಷ ಅಭಿವೃದ್ಧಿ, ಬಡತನ ನಿರ್ಮೂಲನೆ ಹಾಗೂ ಸೈದ್ಧಾಂತಿಕ ವಿಚಾರಗಳ ಬಗ್ಗೆ ವಿಜಯನ್ ಅವರ ಜತೆ ಚರ್ಚಿಸಲು ಸಿದ್ಧವಿರುವುದಾಗಿ ಹೇಳಿದ್ದರು.

ಇದಕ್ಕೆ ತಮ್ಮ ಫೇಸ್ಬುಕ್ ಪುಟದಲ್ಲಿ ಉತ್ತರ ನೀಡಿದ ವಿಜಯನ್ ``ಬಿಜೆಪಿ ಅಧ್ಯಕ್ಷರು ಅಭಿವೃದ್ಧಿಯ ಹಂತ ಹಾಗೂ ಸಿದ್ಧಾಂತಗಳ ಬಗ್ಗೆ ಚರ್ಚೆ ನಡೆಸಲು ಉದ್ದೇಶಿಸಿದ್ದರೆ ಆ ಸವಾಲನ್ನು  ಮನಃಪೂರ್ವಕವಾಗಿ ಸ್ವಾಗತಿಸಲಾಗುವುದು '' ಎಂದು ಬರೆದಿದ್ದಾರೆ.

ಶಾ ಅವರನ್ನು ನೇರವಾಗಿ ಉದ್ದೇಶಿಸಿ ಬರೆಯಲಾದ ಅವರ ಫೇಸ್ಬುಕ್ ಪೋಸ್ಟಿನಲ್ಲಿ ``ಅಮಿತ್ ಭಾಯ್,  ಅಭಿವೃದ್ಧಿ ಎಂದರೆ ಕೆಲ ಬಿಜೆಪಿ ನೇತೃತ್ವದ ಸರಕಾರಗಳ ನೀತಿಯಂತೆ ಕೆಲ  ಬಹುಮಹಡಿ ಕಟ್ಟಡಗಳ ನಿರ್ಮಾಣ ಹಾಗೂ ಕೆಲ ಉದ್ಯಮಿಗಳ  ಅಭಿವೃದ್ಧಿಯಲ್ಲ. ಕೇರಳದ ಅಂತಾರಾಷ್ಟ್ರೀಯ ಗುಣಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕದ ಹತ್ತಿರಕ್ಕಾದರೂ  ಯಾವುದಾರೂ ಬಿಜೆಪಿ  ಆಡಳಿತದ ರಾಜ್ಯ ಬಂದಿದೆಯೇ ಎಂದು ಅವರು ಹೇಳಬಹುದೇ ? ಕೇರಳದ ಅಭಿವೃದ್ಧಿ ಮಾದರಿ ಅಲ್ಲಿನ ಜನರ  ಪ್ರಗತಿಪರ ಧೋರಣೆಯ ಆಧರಿತವಾಗಿದೆ.  ಜಾತ್ಯತೀತ ಮೌಲ್ಯಗಳ ಮೇಲೆ ನಿರ್ಮಿಸಲ್ಪಟ್ಟ ಹೃದಯ ಈ ರಾಜ್ಯಕ್ಕಿದೆ. ಆದರೆ ಬಿಜೆಪಿಗೆ ವೈಷಮ್ಯ ಹಾಗೂ  ಮತೀಯ ಸಿದ್ಧಾಂತಗಳ ಅಜೆಂಡಾ ಇದೆ.''

ಬಿಜೆಪಿಯ ಜನ ರಕ್ಷಾ ಯಾತ್ರೆಯನ್ನು ಕೇರಳದ ಜನರು ತಿರಸ್ಕರಿಸಿದ್ದಾರೆ ಎಂದು ಹೇಳಿದ ಪಿಣರಾಯಿ, ``ಈ ವಿಫಲ ಯಾತ್ರೆಯು ಬಿಜೆಪಿಯ ಇಬ್ಬಗೆ ನೀತಿಯನ್ನು ದೇಶದ ಜನರ ಮುಂದಿಟ್ಟಿದೆ,'' ಎಂದರು.

ಪ್ರಚೋದನಾತ್ಮಕ ಪ್ರಚಾರದ ಅಗತ್ಯವೇನಿತ್ತು ? ರಾಜ್ಯದ ಶಾಂತಿ ಸೌಹಾರ್ದತೆಯನ್ನು ನುಚ್ಚು ನೂರು ಮಾಡಲೇ ?'' ಎಂದು ಅವರು ಪ್ರಶ್ನಿಸಿದರು.

ವೆಂಗರ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು ``ಬಿಜೆಪಿಯ ಕಳಪೆ ನಿರ್ವಹಣೆ ಬಹಳಷ್ಟನ್ನು ಹೇಳುತ್ತದೆ. ಇಂತಹ ಕೆಟ್ಟ ರಾಜಕೀಯವನ್ನು ಕೇರಳದ ಜನರು ಹೇಗೆ ಸ್ವೀಕರಿಸುತ್ತಾರೆಂದು  ಅಮಿತ್ ಶಾಗೆ ಈಗಲಾದರೂ ಅರ್ಥವಾಗಿರಬಹುದು. ಕೇರಳದ ಜನರು ಕಲಿಸಿದ ಪಾಠವನ್ನು ಅವರು ಅರಿಯುತ್ತಾರೆಂಬ ನಂಬಿಕೆ ನನಗಿದೆ,'' ಎಂದೂ ಪಿಣರಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News