ಗೂಗಲ್ ತನ್ನ ಡೂಡಲ್ ಮೂಲಕ ಈ ಭಾರತೀಯನಿಗೆ ಗೌರವ ಸಮರ್ಪಿಸಿದೆ..

Update: 2017-10-19 10:35 GMT

ಹೊಸದಿಲ್ಲಿ,ಅ.19: ಗುರುವಾರದಂದು ಗೂಗಲ್ ತನ್ನ ಡೂಡಲ್ ಅನ್ನು ಖ್ಯಾತ ಭಾರತೀಯ-ಅಮೆರಿಕನ್ ಖಗೋಳವಿಜ್ಞಾನಿ ಸುಬ್ರಹ್ಮಣ್ಯನ್   ಚಂದ್ರಶೇಖರ್ ಅವರ  107ನೇ ಜನ್ಮದಿನಾಚರಣೆಯ ಅಂಗವಾಗಿ ಅವರಿಗೆ ಸಮರ್ಪಿಸಿದೆ. ಅವರು 1983ರಲ್ಲಿ  ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು  ವಿಲಿಯಂ ಎ ಫೌಲರ್ ಜತೆಗೆ ಪಡೆದುಕೊಂಡಿದ್ದರು. ನಕ್ಷತ್ರಗಳ ರಚನೆ ಮತ್ತು ವಿಕಸನದ ಕುರಿತಾದ ಸಂಶೋಧನಾ ಅಧ್ಯಯನಕ್ಕೆ  ಈ ಪ್ರತಿಷ್ಠಿತ ಪ್ರಶಸ್ತಿ ಅವರಿಗೆ ನೀಡಲಾಗಿತ್ತು.

ಈಗಿನ ಪಾಕಿಸ್ತಾನದ ಲಾಹೋರ್ ನಗರದಲ್ಲಿ ವಾಸವಾಗಿದ್ದ ತಮಿಳು ಕುಟುಂಬವೊಂದರಲ್ಲಿ ಅಕ್ಟೋಬರ್ 19, 1910ರಂದು ಜನಿಸಿದ ಚಂದ್ರಶೇಖರ್ ಅವರು ಭಾರತದ ನೊಬೆಲ್ ಪಾರಿತೋಷಕ ವಿಜೇತ ಭೌತವಿಜ್ಞಾನಿ  ಸಿವಿ ರಾಮನ್  ಅವರ ಸೋದರಳಿಯನಾಗಿದ್ದಾರೆ. ಸುಬ್ರಹ್ಮಣ್ಯನ್ ಅಯ್ಯರ್ ಹಾಗೂ ಸೀತಾಲಕ್ಷ್ಮಿ ಎಂಬವರ ಪ್ರಥಮ ಪುತ್ರನಾಗಿದ್ದ  ಚಂದ್ರಶೇಖರ್ ಅವರಿಗೆ 12 ವರ್ಷಗಳ ತನಕ ಮನೆಯಲ್ಲಿಯೇ ಶಿಕ್ಷಣ ನೀಡಲಾಗಿತ್ತು. ಆಗಿನ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಪಡೆದ ಅವರು ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ  ಪಡೆದು 1938ರಲ್ಲಿ ಪಿಎಚ್ಡಿ ಪದವಿ ಪಡೆದರು.

'ದಿ ಚಂದ್ರಶೇಖರ್ ಲಿಮಿಟ್' ಅವರು ವಿಜ್ಞಾನಕ್ಕೆ ನೀಡಿದ ಬಲುದೊಡ್ಡ ಕೊಡುಗೆಯಾಗಿತ್ತು. ಸ್ಥಿರವಾಗಿರುವ ಶ್ವೇತವರ್ಣದ ಕುಬ್ಜ ನಕ್ಷತ್ರದ ಗರಿಷ್ಠ  ದ್ರವ್ಯರಾಶಿಯನ್ನು ಅದು ವಿವರಿಸುತ್ತದೆ.  ಆದರೆ ಅವರ ಈ ಕೊಡುಗೆಯನ್ನು ದಶಕಗಳ ಕಾಲ ನಿರ್ಲಕ್ಷ್ಯಿಸಲಾಗಿತ್ತು. ಘರ್ಷಿಸುವ ಗುರುತ್ವಾಕರ್ಷಣೆಯ ತರಂಗಗಳ ಸಿದ್ಧಾಂತದ ಬಗ್ಗೆಯೂ ಅವರು ಅಧ್ಯಯನ ನಡೆಸಿದ್ದರು.

ನಾಸಾದ ಉನ್ನತ ಎಕ್ಸ್-ರೇ ವೀಕ್ಷಣಾಲಯವನ್ನು ಚಂದ್ರಶೇಖರ್ ಎಕ್ಸ್-ರೇ ವೀಕ್ಷಣಾಲಯ ಎಂದೂ ಅವರ ಗೌರವಾರ್ಥ ಹೆಸರಿಸಲಾಗಿತ್ತು.

ಚಿಕಾಗೋ ವಿಶ್ವವಿದ್ಯಾಲಯದಲ್ಲಿ ತಮ್ಮ 26ನೇ ವಯಸ್ಸಿಗೆ  ಡೆಪ್ಯುಟಿ ಪ್ರೊಫೆಸರ್ ಆಗಿ ಅವರು ಸೇರಿ ಅಲ್ಲಿಯೇ ಬಹಳ ವರ್ಷ ತಮ್ಮ ಸೇವೆ ಮುಂದುವರಿಸಿದ್ದರು.  ತಮ್ಮ 34ನೇ ವಯಸ್ಸಿನಲ್ಲಿ ಅವರು ರಾಯಲ್ ಸೊಸೈಟಿ ಆಫ್ ಲಂಡನ್ ಗೆ ನೇಮಕಗೊಂಡಿದ್ದರು. 1937ರಲ್ಲಿ ಅಮೆರಿಕಾಗೆ ತಮ್ಮ ಪತ್ನಿ ಲಲಿತಾ ದೊರೆಸ್ವಾಮಿ ಜತೆ ವಲಸೆ ಹೋದ ಅವರು 1953ರಲ್ಲಿ ಅಮೆರಿಕನ್ ಪೌರತ್ವ ಪಡೆದಿದ್ದರು. ಎರಡನೇ ವಿಶ್ವಯುದ್ಧದ ವೇಳೆ ಅವರ ಅಮೆರಿಕಾದ ಸೇನೆಯ ಸಂಶೋಧನಾ ಕಾರ್ಯಕ್ಕೆ ನೆರವಾಗಿದ್ದರು.

ಆಗಸ್ಟ್ 21, 1995ರಲ್ಲಿ ಅವರು ಚಿಕಾಗೋದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಅವರಿಗೆ 84 ವರ್ಷ ವಯಸ್ಸಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News