ಯಡಿಯೂರಪ್ಪರ ಮನೆಗೆ ಹೋಗಲು ಮುಂದಾದ ಪೊಲೀಸರು

Update: 2017-10-19 16:37 GMT

ಬೆಂಗಳೂರು, ಅ.19: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಅವರ ಮನೆಗೆ ಹೋಗಲು ಪೊಲೀಸರು ಮುಂದಾಗಿರುವುದಾಗಿ ತಿಳಿದು ಬಂದಿದೆ.

ಸೆ.28ರಂದು ನಗರದ ಮಲ್ಲೇಶ್ವರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ 1ನೆ ಮಹಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಎಸಿಪಿ ಎ.ಆರ್.ಬಡಿಗೇರ್ ನೋಟಿಸ್ ನೀಡಿದ್ದರು. ಆದರೆ, ಯಡಿಯೂರಪ್ಪ ಪೊಲೀಸರ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ವರು ತಿಳಿಸಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್ 160 ರ ಅಡಿಯಲ್ಲಿ 65 ವರ್ಷ ದಾಟಿದ ವ್ಯಕ್ತಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವ ಅವಕಾಶ ಇದೆ ಎಂದು ಬಿಎಸ್ಸೈ ತನಿಖಾಧಿಕಾರಿ ಮಲ್ಲೇಶ್ವರಂ ಎಸಿಪಿ ಬಡಿಗೇರ ಅವರಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಕಲಂ 160ರ ಅಡಿಯಲ್ಲಿ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಅವರಿಂದ ಹೇಳಿಕೆ ಪಡೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಯಡಿಯೂರಪ್ಪ ಅವರಿಂದ ಹೇಳಿಕೆ ದಾಖಲು ಮಾಡಿಕೊಂಡ ನಂತರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News