​ಡೆನ್ಮಾರ್ಕ್ ಓಪನ್: ಎಂಟರ ಘಟ್ಟಕ್ಕೆ ಪ್ರಣಯ್, ಸೈನಾ, ಶ್ರೀಕಾಂತ್

Update: 2017-10-20 03:51 GMT

ಒಡೆನ್ಸ್ (ಡೆನ್ಮಾರ್ಕ್), ಅ.20: ಮೂರು ಬಾರಿಯ ಒಲಿಂಪಿಕ್ಸ್ ಬೆಳ್ಳಿಪದಕ ವಿಜೇತ ಲೀ ಚಾಂಗ್ ವೀ ವಿರುದ್ಧ ಸತತ ಎರಡನೆ ಜಯ ದಾಖಲಿಸಿದ ಭಾರತದ ಎಚ್.ಎಸ್.ಪ್ರಣಯ್, ಡೆನ್ಮಾಕ್ ಓಪನ್ ಸೂಪರ್ ಸೀರಿಸ್‌ನಲ್ಲಿ ಎಂಟರ ಘಟ್ಟ ತಲುಪಿದ್ದಾರೆ. ಭಾರತದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಕೂಡಾ ಕ್ವಾರ್ಟರ್ ಫೈನಲ್ ಹಂತಕ್ಕೆ ಮುನ್ನಡೆದಿದ್ದಾರೆ.

ನಾಲ್ಕು ತಿಂಗಳ ಹಿಂದೆ ಇಂಡೋನೇಷ್ಯಾ ಸೂಪರ್ ಸೀರಿಸ್ ಪ್ರೀಮಿಯರ್‌ನಲ್ಲಿ ಚಾಂಗ್ ವೀ ವಿರುದ್ಧ ನೇರ ಸೆಟ್‌ಗಳ ಜಯ ಸಾಧಿಸಿ ಅಚ್ಚರಿ ಮೂಡಿಸಿದ್ದ ಪ್ರಣಯ್, ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ ವನ್ ಮಲೇಷ್ಯನ್ ಆಟಗಾರನ ವಿರುದ್ಧ 21-17, 11-21, 21-19 ಅಂತರದಲ್ಲಿ ಜಯ ಸಾಧಿಸಿದರು. ಒಂದು ಗಂಟೆ ಮೂರು ನಿಮಿಷಗಳ ಹೋರಾಟದಲ್ಲಿ ಪ್ರಣಯ್, ಅನುಭವಿ ಆಟಗಾರರನ್ನು ಬಗ್ಗುಬಡಿದರು.

"ಅವರನ್ನು ಮತ್ತೆ ಸದೆಬಡಿದಿರುವುದು ಖುಷಿ ತಂದಿದೆ. ಈ ವಯಸ್ಸಿನಲ್ಲಿ ಕೂಡಾ ಆತ ಅದ್ಭುತ ಆಟಗಾರ. ಯಾವುದೇ ಸ್ಥಿತಿಯಲ್ಲಿ ಆಡಬಲ್ಲ. ಈ ಹಿಂದೆಯೂ ಇದನ್ನು ಸಾಧಿಸಿದ್ದರೂ, ಪ್ರಶಸ್ತಿ ಗೆದ್ದಿರಲಿಲ್ಲ. ಆದ್ದರಿಂದ ಮುಂದಿನ ಪಂದ್ಯದ ಬಗ್ಗೆ ಗಮನಹರಿಸುತ್ತೇನೆ" ಎಂದು ಪ್ರಣಯ್ ನುಡಿದರು.

ಇಂಡೋನೇಷ್ಯಾ ಹಾಗೂ ಆಸ್ಟ್ರೇಲಿಯಾ ಸೀರಿಸ್ ಪ್ರಶಸ್ತಿ ಗೆದ್ದಿರುವ 8ನೆ ಕ್ರಮಾಂಕದ ಆಟಗಾರ ಶ್ರೀಕಾಂತ್, ಕೊರಿಯಾದ ಜಿಯಾನ್ ಹ್ಯಾಕ್ ಜಿನ್ ವಿರುದ್ಧ 21-13, 8-21, 21-18 ಅಂತರದ ಜಯ ಸಾಧಿಸಿದರೆ, ಗ್ಲಾಸ್ಗೊ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಸೈನಾ, ಥಾಯ್ಲೆಂಡ್‌ನ ನಿಟಚವೊನ್ ಜಿಂದಾಪೋಲ್ ವಿರುದ್ಧ 22-20, 21-13 ನೇರ ಸೆಟ್ಟುಗಳ ಜಯ ಸಾಧಿಸಿ ಎಂಟರ ಹಂತ ತಲುಪಿದರು.

ಮುಂದಿನ ಪಂದ್ಯದಲ್ಲಿ ಪ್ರಣಯ್, ಕೊರಿಯಾದ ಅಗ್ರ ಶ್ರೇಯಾಂಕದ ಸಾನ್ ವಾನ್ ಹೋ ವಿರುದ್ಧ, ಶ್ರೀಕಾಂತ್ ಹಾಲಿ ವಿಶ್ವ ಚಾಂಪಿಯನ್ ವಿಕ್ಟರ್ ಅಕ್ಸೆಲ್‌ಸೆನ್ ವಿರುದ್ಧ ಹಾಗೂ ಸೈನಾ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೆಣಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News