ಡಿಸೆಂಬರ್ ಅಂತ್ಯದೊಳಗೆ ನವ ಕರ್ನಾಟಕ 2025 ನಕಾಶೆ ಸಿದ್ಧ: ರೇಣುಕಾ ಚಿದಂಬರಂ

Update: 2017-10-21 16:28 GMT

ಬೆಂಗಳೂರು, ಅ.21: ಕರ್ನಾಟಕದ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ರೂಪಿಸುತ್ತಿರುವ ನವ ಕರ್ನಾಟಕ 2025ರ ನಕಾಶೆಯನ್ನು ಡಿಸೆಂಬರ್ ಅಂತ್ಯದೊಳಗೆ ಸಿದ್ಧಪಡಿಸಲಾಗುತ್ತದೆ ಎಂದು ಸರಕಾರದ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ತಿಳಿಸಿದ್ದಾರೆ.

ನಗರದ ಬನಶಂಕರಿಯಲ್ಲಿನ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನವ ಕರ್ನಾಟಕ 2025 ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ 2025 ರ ವೇಳೆಗೆ ಕರ್ನಾಟಕವನ್ನು ಎಲ್ಲ ಕ್ಷೇತ್ರಗಳಲ್ಲೂ ಸಮಗ್ರವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈಗಾಗಲೇ 15 ಜಿಲ್ಲೆಗಳಿಂದ ಸಲಹೆ ಪಡೆದಿದ್ದು, ಉಳಿದ 15 ಜಿಲ್ಲೆಗಳಿಂದ ಸಾಮಾನ್ಯ ಜನರ ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಮುಖರ ಸಲಹೆ ಪಡೆಯಲಾಗುವುದು ಎಂದರು.

ಸಲಹೆ ಪಡೆದ ನಂತರ ನಕಾಶೆ ತಯಾರಿಸಿ ಅನಂತರ ಮಾಹಿತಿ ಕೋಶದಲ್ಲಿರುವ ಅಂಶಗಳನ್ನು ಸಂಗ್ರಹಿಸಿ 13 ಇಲಾಖೆಗಳಿಗೂ ಪ್ರತ್ಯೇಕವಾಗಿ ಕೈಪಿಡಿಯನ್ನು ಸಿದ್ಧಪಡಿಸಿ ಕಾರ್ಯಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಅಭಿವೃದ್ಧಿ ನಕಾಶೆ ಕರಡು ಪ್ರತಿಯನ್ನು ಸಿದ್ಧಪಡಿಸಿದ ನಂತರ 2 ಪ್ರಮುಖ ಹಂತಗಳಲ್ಲಿ ಸಂಗ್ರಹಿಸಿರುವ ಎಲ್ಲರ ಅಭಿಪ್ರಾಯಗಳ ಕುರಿತು ಪರಿಶೀಲನೆ ಮಾಡಲಾಗುತ್ತದೆ. ಮೊದಲನೆ ಹಂತದಲ್ಲಿ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಪ್ರತಿ ಇಲಾಖೆಯ ಮುಖ್ಯಸ್ಥರು ಕರಡು ಯೋಜನೆಯ ಬಗ್ಗೆ ಪರಿಶೀಲಿಸಲಿದ್ದಾರೆ ಎಂದರು.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಅಂತಿಮವಾಗಿ ಯೋಜನೆಯ ಬಗ್ಗೆ ಚರ್ಚೆ ನಡೆಸಿ ಮರು ಪರಿಶೀಲನೆ ನಡೆಸಲಿದ್ದಾರೆ. ಬಿಬಿಎಂಪಿ, ಬೆಸ್ಕಾಂ, ಮೆಟ್ರೋ, ಬಿಡಿಎ ಸೇರಿದಂತೆ ಹಲವು ಇಲಾಖೆಗಳ ಅಭಿವೃದ್ಧಿಯ ಬಗ್ಗೆಯೂ ಸಲಹೆಗಳನ್ನು ಪಡೆಯಲಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News