ಸೌದಿ ಅರೇಬಿಯದಲ್ಲಿ ಕಡಿಮೆಯಾಗಲಿದೆ ವಿದೇಶಿಯರ ಸಂಖ್ಯೆ: ವರದಿ

Update: 2017-10-21 09:47 GMT

ರಿಯಾದ್, ಅ.21: ಮುಂದಿನ ವರ್ಷದ ಕೊನೆಯಲ್ಲಿ ಸೌದಿ ಅರೇಬಿಯದಲ್ಲಿರುವ ವಿದೇಶಿಯರ ಸಂಖ್ಯೆ ಕಡಿಮೆಯಾಗಲಿದೆ. ಈಗ ಅಲ್ಲಿನ ಜನಸಂಖ್ಯೆಯ ಶೇ. 37ರಷ್ಟು ವಿದೇಶಿ ಕಾರ್ಮಿಕರಿದ್ದು, ಇದು ಶೇ.32ಕ್ಕೆ ಇಳಿಕೆಯಾಗಲಿದೆ ಎಂದು ಸಾಮಾನ್ಯ ಅಂಕಿಅಂಶಗಳ ಇಲಾಖೆ ಹೊರಡಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಉದ್ಯೋಗಕ್ಷೇತ್ರದಲ್ಲಿ ಸ್ವದೇಶೀಕರಣ ಹೆಚ್ಚಾಗುವುದರೊಂದಿಗೆ ವಿದೇಶಿ ಉದ್ಯೋಗಿಗಳು ಗಣನೀಯ ಸಂಖ್ಯೆಯಲ್ಲಿ ಸೌದಿ ತೊರೆಯಲಿದ್ದಾರೆ. 2018 ಕೊನೆಯಲ್ಲಿ  ಒಂದೂವರೆ ಲಕ್ಷ ವಿದೇಶಿಯರು  ಕೆಲಸ ಕಳಕೊಳ್ಳಲಿದ್ದಾರೆ ಎಂದುವರದಿಯಲ್ಲಿ ತಿಳಿಸಲಾಗಿದೆ. 

ಈ ವರ್ಷ ಸೆಪ್ಟಂಬರ್ ವರೆಗಿನ ಅಂಕಿಅಂಶದಂತೆ ಸೌದಿಅರೇಬಿಯದಲ್ಲಿರುವ ವಿದೇಶಿಯರು ತಮ್ಮ ತಾಯ್ನಾಡಿಗೆ ಕಳುಹಿಸುವ ಹಣದಲ್ಲಿ ಶೇ. 8ರಷ್ಟು ಇಳಿಕೆಯಾಗಿದೆ. ಮುಂದಿನ ತಿಂಗಳಲ್ಲಿ ಇದು ಪುನಃ ಕಡಿಮೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಸೆಪ್ಟಂಬರ್‍ನಲ್ಲಿ 8,900 ಕೋಟಿ ರಿಯಾಲನ್ನು ವಿದೇಶಿಯರು ಊರಿಗೆ ಕಳುಹಿಸಿದ್ದರು. ಈ ವರ್ಷ ಅದು 7,700 ಕೋಟಿ  ರಿಯಾಲ್‍ಗೆ ಇಳಿಕೆಯಾಗಿದೆ.  ವಿದೇಶಿ ಕಾರ್ಮಿಕರು ಊರಿಗೆ ಕಳುಹಿಸುವ ಸರಾಸರಿ ಹಣ 900 ರಿಯಾಲ್‍ನಿಂದ 760 ರಿಯಾಲ್‍ಗೆ ಇಳಿಕೆಯಾಗಿದೆ ಎಂದು ಮಾನಿಟರಿ ಏಜೆನ್ಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News