×
Ad

ಬಿಬಿಎಂಪಿ ಸಮಸ್ಯೆ ನಿವಾರಣೆಯತ್ತ ಚಿತ್ತ

Update: 2017-10-22 18:05 IST

ಬೆಂಗಳೂರು, ಅ.22: ಬಿಬಿಎಂಪಿ ಸಮಗ್ರ ಅಭಿವೃದ್ಧಿ ಹಾಗೂ ಸಮಸ್ಯೆ ನಿವಾರಣೆ ಕುರಿತಂತೆ ಮೇಯರ್ ಸಂಪತ್ ರಾಜ್ ಅವರು ಹಿರಿಯ ಸ್ವಾತಂತ್ರ ಹೋಗಾರಟಗಾರು, ಸಾಹಿತಿಗಳು ಮತ್ತು ಚಿಂತಕರೊಂದಿಗೆ ಚರ್ಚೆ ನಡೆಸಿ ಸಲಹೆ ಪಡೆದುಕೊಂಡರು.

ರವಿವಾರ ಇಲ್ಲಿನ ಜೆಪಿ ನಗರದಲ್ಲಿ ಹಿರಿಯ ಚಿತ್ರನಟ ಮುಖ್ಯಮಂತ್ರಿ ಚಂದ್ರು ಅವರ ನಿವಾಸದಲ್ಲಿ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸೇರಿದಂತೆ ಪ್ರಮುಖ ಚಿಂತಕರ ಜೊತೆ ಚರ್ಚೆ ನಡೆಸಿ ಬಿಬಿಎಂಪಿ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಡಾಲರ್ಸ್‌ ಕಾಲನಿಯಲ್ಲಿ ರಸ್ತೆ ಗುಂಡಿ, ನೀರು ನಿಲ್ಲುವುದು ಸೇರಿ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮೇಯರ್ ಸಂಪತ್‌ರಾಜ್ ಅವರಿಗೆ ಮನವಿ ಮಾಡಲಾಯಿತು. ಬಳಿಕ ಅವರು ಮೊಬೈಲ್ ಕರೆ ಮೂಲಕ ಅಧಿಕಾರಿಗಳಿಗೆ ಸಮಸ್ಯೆ ನಿವಾರಿಸುವ ಕಾಮಗಾರಿಯನ್ನು ನಾಳೆಯಿಂದಲೇ ಆರಂಭಿಸುವಂತೆ ಸೂಚನೆ ನೀಡಿದರು.

ಇದೇ ವ್ಯಾಪ್ತಿಯಲ್ಲಿರುವ ರಾಜಕಾಲುವೆಯೊಂದನ್ನು ದೊರೆಸ್ವಾಮಿ ಅವರೊಂದಿಗೆ ವೀಕ್ಷಿಸಿದ ಮೇಯರ್, ಶೀಘ್ರದಲ್ಲಿಯೇ ಮಳೆಗಾಲದ ಸಮಸ್ಯೆ ನಿವಾರಣೆ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಎಚ್‌ಡಿಕೆ ಭೇಟಿ: ನಂತರ ಮೇಯರ್ ಸಂಪತ್‌ ರಾಜ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಪತ್‌ ರಾಜ್, ನಾನು ಮಹಾಪೌರರಾಗಿ ಅಧಿಕಾರವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕುಮಾರ ಸ್ವಾಮಿ ಅವರನ್ನು ಭೇಟಿಯಾದೆ. ಅವರು ಬಿಬಿಎಂಪಿ ಅಭಿವೃದ್ಧಿ ಕುರಿತು ಕೆಲ ಸಲಹೆ ಗಳನ್ನು ನೀಡಿದ್ದಾರೆ. ಅವರ ಮಾರ್ಗದರ್ಶನದಂತೆ ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News