ರಾಮಚಂದ್ರನ್ ಚಿತ್ರಕಲೆ ಪ್ರವಾಸೋದ್ಯಮ ಪಟ್ಟಿಗೆ ಸೇರಲಿ: ಚಿರಂಜೀವಿ ಸಿಂಗ್
ಬೆಂಗಳೂರು, ಅ.22: ಹಿರಿಯ ಚಿತ್ರಕಲಾವಿದ ಕೆ.ಎನ್.ರಾಮಚಂದ್ರನ್ ಅವರು ಭಾರತೀಯ ಚಿತ್ರಕಲೆಯನ್ನು ಉಳಿಸಿ ಬೆಳೆಸಿದವರು. ಹೀಗಾಗಿ, ಅವರ ರಚನೆಯ ಚಿತ್ರಕಲೆಯನ್ನು ಪ್ರವಾಸೋದ್ಯಮ ಪಟ್ಟಿಗೆ ಸೇರಿಸಬೇಕೆಂದು ನಿವೃತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಂಸ್ಕೃತಿ ಚಿಂ ಕ ಚಿರಂಜೀವಿಸಿಂಗ್ ಒತ್ತಾಯಿಸಿದ್ದಾರೆ.
ರವಿವಾರ ಬಸವೇಶ್ವರ ನಗರದ ಶಾರದಾ ಕಾಲನಿಯಲ್ಲಿ ಕೆ.ಎನ್.ರಾಮಚಂದ್ರನ್ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಯಂ ಕಲಾ ಕ್ಯಾಲರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಮಚಂದ್ರನ್ ರಚಿಸಿದ ಚಿತ್ರಕಲೆಯನ್ನು ಎಲ್ಲರಿಗೂ ಪರಿಚಿಸುವ ಅವಶ್ಯಕತೆಯಿದ್ದು, ಈ ಚಿತ್ರಕಲೆಗಳನ್ನು ಪ್ರವಾಸೋದ್ಯಮದ ಪಟ್ಟಿಗೆ ಸೇರಿಸಬೇಕೆಂದು ಹೇಳಿದರು.
ಹೊಸದಿಲ್ಲಿಯಲ್ಲಿ ಆರ್ಟ್ ಗ್ಯಾಲರಿ ಇರುವಂತೆ ಕರ್ನಾಟಕದಲ್ಲೂ ರಾಜ್ಯ ಆರ್ಟ್ ಗ್ಯಾಲರಿಯನ್ನು ಸ್ಥಾಪಿಸಬೇಕು. ಇದರಿಂದ, ಚಿತ್ರಕಲೆಗೆ ಪ್ರೋತ್ಸಾಹ ಹಾಗೂ ಅಭಿವೃದ್ಧಿಗೆ ಅವಕಾಶಗಳನ್ನು ಕಲ್ಪಿಸಿದಂತಾಗುತ್ತದೆ. ರಾಜ್ಯ ಸರಕಾರವು ಕಲಾಸಕ್ತರ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬಂದಿದೆ. ಆರ್ಟ್ ಗ್ಯಾಲರಿಯ ನೆನಪು ತರುವ ದಿವಗಂತ ಕಲಾವಿದ ರಾಮಚಂದ್ರನ್‌ನವರು ದೇಶ ಕಂಡ ಅಪರೂಪದ ಕಲಾವಿದರು ಎಂದು ಸ್ಮರಿಸಿದರು.
ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಮಾತನಾಡಿ, ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಡಾ.ರಾಜ್ ಕುಮಾರ್, ರಾಮಚಂದ್ರನ್, ವೆಂಕಟಪ್ಪ ಅವರು ತಮ್ಮ ಕಲೆ ಮತ್ತೊಬ್ಬರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದರು ಎಂದರು.
ಹಣವನ್ನು ಗಳಿಸಲು ಜನರು ಶ್ರಮ ವಹಿಸುತ್ತಿದ್ದರೆ, ಕೆ.ಎನ್.ರಾಮಚಂದ್ರನ್ ಕುಟುಂಬದವರು ಹಣಕ್ಕಿಂತಲೂ ಕಲೆಯೇ ಮುಖ್ಯಯೆಂದು ಇಂದಿಗೂ ಕಲೆಯನ್ನು ಉಸಿರಾಗಿಸಿಕೊಂಡಿದ್ದಾರೆ. ಅಲ್ಲದೆ, ಜನರು ಚಿತ್ರಕಲಾ ಪರಿಷತ್‌ಗೆ ಬಂದು ಹೋಗುವಂತೆ ಜಯಂ ಕಲಾ ಗ್ಯಾಲರಿಗೂ ಬಂದು ಹೋಗುವಂತೆ ಆಗಬೇಕೆಂದು ಆಸೆ ವ್ಯಕ್ತಪಡಿಸಿದರು.
ಹಿರಿಯ ಚಿತ್ರಕಲಾವಿದ ಜೆ.ಎಸ್.ಖಂಡೇರಾವ್ ಮಾತನಾಡಿ, ರಾಮಚಂದ್ರನ್ ಅವರು ರಚಿಸಿದ ಚಿತ್ರಕಲೆಯಲ್ಲಿ ವಾಸ್ತವತೆ ಹಾಗೂ ದಿನನಿತ್ಯದ ಬದುಕಿನ ಚಿತ್ರಣವ್ನು ಕಾಣಬಹುದು ಎಂದು ಹೇಳಿದರು.