ಭಡ್ತಿ ಮೀಸಲಾತಿ ಹೋರಾಟಕ್ಕೆ ಹಿಂದುಳಿದವರು ಕೈ ಜೋಡಿಸಲಿ: ಡಾ.ಸಿ.ಎಸ್.ದ್ವಾರಕನಾಥ್

Update: 2017-10-22 14:27 GMT

ಬೆಂಗಳೂರು, ಅ. 22: ಪರಿಶಿಷ್ಟರ ಭಡ್ತಿ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಹಿಂದುಳಿದ ವರ್ಗಗಳು ಧ್ವನಿ ಗೂಡಿಸಬೇಕು. ಆ ಮೂಲಕ ಮೀಸಲಾತಿಯನ್ನು ನಿರ್ಣಾಮ ಮಾಡಲು ಹೊಂಚು ಹಾಕಿರುವ ಮನುವಾದಿಗಳ ಕುತಂತ್ರಕ್ಕೆ ಸವಾಲು ಹಾಕಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಸಲಹೆ ನೀಡಿದ್ದಾರೆ.

ರವಿವಾರ ಭಡ್ತಿ ಮೀಸಲಾತಿ ಸಂರಕ್ಷಣಾ ಸಮಿತಿ ಬೆಂಗಳೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ‘ಮೀಸಲಾತಿ ಮತ್ತು ಭಡ್ತಿ ಮೀಸಲಾತಿ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪರಿಶಿಷ್ಟರ ಭಡ್ತಿ ಮೀಸಲಾತಿ ಹಿಂದುಳಿದ ಸಮುದಾಯ ವಿರೋಧಿಸುವುದರಿಂದ ಮನುವಾದಿಗಳಿಗೆ ಲಾಭವಾಗುತ್ತದೆಯೇ ವಿನಃ ಹಿಂದುಳಿದ ಸಮುದಾಯಕ್ಕೆ ಯಾವುದೇ ಪ್ರಯೋಜವಾಗುವುದಿಲ್ಲ. ಹೀಗಾಗಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ನೀಡಿದಂತೆ ಹಿಂದುಳಿದ ವರ್ಗದವರಿಗೂ ಭಡ್ತಿ ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡಬೇಕು. ಈ ಹೋರಾಟಕ್ಕೆ ದಲಿತ ಸಮುದಾಯವು ಧ್ವನಿ ಗೂಡಿಸಲಿದೆ ಎಂದರು.

ಒಟ್ಟು ಮೀಸಲಾತಿಯಲ್ಲಿ ಶೇ.18ರಷ್ಟು ದಲಿತರಿಗೆ ಮೀಸಲಾದರೆ, ಉಳಿದ ಶೇ.32ರಷ್ಟು ಮೀಸಲಾತಿಯನ್ನು ಅನುಭವಿಸುತ್ತಿರುವುದು ಹಿಂದುಳಿದ ವರ್ಗಗಳು ಎಂಬುದನ್ನು ಮರೆಯಬಾರದು. ಹಿಂದುಳಿದ ವರ್ಗಕ್ಕೆ ಮೀಸಲಾತಿಯನ್ನು ಒದಗಿಸಿಕೊಡುವಲ್ಲಿ ಅಂಬೇಡ್ಕರ್ ಹಾಗೂ ಬಿಎಸ್ಪಿ ಸ್ಥಾಪಕ ಕಾಶ್ಷಿರಾಂ ಹೋರಾಟವನ್ನು ಮರೆಯಬಾರದು ಎಂದು ಹೇಳಿದರು.

ಹಿಂದೂ ಕೋಡ್‌ಬಿಲ್ ಜಾರಿಯಾಗಿಲ್ಲವೆಂದು ಬೇಸತ್ತು ಅಂಬೇಡ್ಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮಾತ್ರ ಎಲ್ಲರಿಗೂ ಗೊತ್ತು. ಆದರೆ, ಇದರ ಜೊತೆಗೆ ಹಿಂದುಳಿದ ವರ್ಗದವರ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದರು. ಅದಕ್ಕೂ ಮೇಲ್ವರ್ಗದವರ ವಿರೋಧ ವ್ಯಕ್ತವಾಯಿತು. ಇವೆರಡೂ ಕಾರಣದಿಂದ ಅಂಬೇಡ್ಕರ್ ಬೇಸತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು ಎಂದರು.

ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಹೊನ್ನು ಸಿದ್ಧಾರ್ಥ ಮಾತನಾಡಿ, ಫ್ರೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಭಡ್ತಿ ಮೀಸಲಾತಿ ವಿರುದ್ಧ ನೀಡುತ್ತಿದ್ದಂತೆ ರಾಜ್ಯಾದ್ಯಂತ ದೊಡ್ಡ ಆಂದೋಲನ ನಡೆಯಬೇಕಾಗಿತ್ತು. ಆದರೆ, ದಲಿತ ಸಮುದಾಯದ ವಿದ್ಯಾವಂತ ವರ್ಗ ಉದಾಸೀನತೆ ತೋರಿರುವುದು ಅಂಬೇಡ್ಕರ್‌ಗೆ ಮಾಡಿದ ಅವಮಾನ ಎಂದು ವಿಷಾದಿಸಿದರು.

ಅಂಬೇಡ್ಕರ್ ನೀಡಿದ ಮೀಸಲಾತಿಯ ಪ್ರತಿಫಲವಾಗಿ ಪ್ರಸ್ತುತ ದಲಿತ ಸಮುದಾಯದ ಹಲವರು ವಿಶ್ವವಿದ್ಯಾನಿಲಯ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ, ನಮ್ಮ ಸಮುದಾಯದ ಶೇ.90ರಷ್ಟು ಮಂದಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಷ್ಟರಲ್ಲಿಯೇ ಮನುವಾದಿಗಳು ಮೀಸಲಾತಿಯ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ. ಹೀಗಾಗಿ ಮೀಸಲಾತಿಯ ಉಳಿವಿಗಾಗಿ ದಲಿತ ಸಮುದಾಯ ಹೋರಾಟ ರೂಪಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಪ್ರೊ.ಶಿವರಾಜು ವಹಿಸಿದ್ದರು. ಕೃತಿಕಾರ ಹೊ.ಬ. ನಾಗಸಿದ್ಧಾರ್ಥ ಹೊಲೆಯಾರ್, ಬಿಎಚ್‌ಇಎಲ್‌ನ ಸೋಲಂಕಿ, ಕವಿ ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಶಿವಣ್ಣ, ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಸೋಮಶೇಖರ್, ದಲಿತ ದಮನಿತರ ಹೋರಾಟ ಸಮಿತಿಯ ಮುಖಂಡ ಭಾಸ್ಕರ್ ಪ್ರಸಾದ್, ಹುಲಿಕುಂಟೆ ಮೂರ್ತಿ ಹಾಜರಿದ್ದರು.

'ಶೇ.100ರಷ್ಟು ಮೀಸಲಾತಿ ಅನುಭವಿಸಿದ್ದು ಬ್ರಾಹ್ಮಣರು'

ದೇಶದಲ್ಲಿ ಮೀಸಲಾತಿ ಎಂಬ ಕಲ್ಪನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಶಿಕ್ಷಣದಲ್ಲಿ ಶೇ.100ರಷ್ಟು ಮೀಸಲಾತಿ ಹೊಂದಿದ್ದವರು ಬ್ರಾಹ್ಮಣರು. ಆಡಳಿತದಲ್ಲಿ ಶೇ.100ರಷ್ಟು ಮೀಸಲಾತಿಯನ್ನು ಕ್ಷತ್ರಿಯರು ಹೊಂದಿದ್ದರು. ಹಾಗೂ ವ್ಯಾಪಾರದಲ್ಲಿ ಶೇ.100ರಷ್ಟು ಇತಿಹಾಸವನ್ನು ವೈಶ್ಯರು ಹೊಂದಿದ್ದ. ಇರುವರು ಮಾಡಿದ ಈ ಪ್ರಮಾದದಿಂದಾಗಿ ಸಾಮಾಜಿಕ ನ್ಯಾಯವನ್ನು ಸರಿದೂಗಿಸುವ ನಿಟ್ಟಿನಲ್ಲಿ ಇವತ್ತು ದಲಿತ ಸಮುದಾಯಕ್ಕೆ ಮೀಸಲಾತಿ ಕೊಡುವುದು ಎಲ್ಲರ ಜವಾಬ್ದಾರಿ.

-ಡಾ.ಸಿ.ಎಸ್.ದ್ವಾರಕನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News