ನ್ಯೂಝಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿಗೆ ಭಾರತ ತಂಡ ಪ್ರಕಟ

Update: 2017-10-23 07:15 GMT

ಹೊಸದಿಲ್ಲಿ, ಅ.23:ನ್ಯೂಝಿಲೆಂಡ್ ವಿರುದ್ಧ ಮುಂದಿನ ತಿಂಗಳು ಆರಂಭವಾಗಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಟೀಮ್ ಇಂಡಿಯಾವನ್ನು ಸೋಮವಾರ ಪ್ರಕಟಿಸಲಾಗಿದ್ದು, ಹೊಸ ಮುಖಗಳಾದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಹಾಗೂ ವೇಗದ ಬೌಲರ್ ಮುಹಮ್ಮದ್ ಸಿರಾಜ್‌ಗೆ ಸ್ಥಾನ ನೀಡಲಾಗಿದೆ.

ಮುಂಬೈನಲ್ಲಿ ಸೋಮವಾರ ಸಭೆ ಸೇರಿರುವ ಆಯ್ಕೆ ಸಮಿತಿಯು ನ.1 ರಿಂದ ಹೊಸದಿಲ್ಲಿಯಲ್ಲಿ ಆರಂಭವಾಗಲಿರುವ ಟ್ವೆಂಟಿ-20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಈ ತಿಂಗಳಾರಂಭದಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿರುವ ಹೆಚ್ಚಿನ ಆಟಗಾರರನ್ನೇ ಉಳಿಸಿಕೊಳ್ಳಲಾಗಿದ್ದು ಕೇದಾರ್ ಜಾಧವ್‌ರನ್ನು ಕೈಬಿಡಲಾಗಿದೆ.

 ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದ 22ರ ಹರೆಯದ ಅಯ್ಯರ್ ಇತ್ತೀಚೆಗೆ ಭಾರತ ‘ಎ’ ತಂಡದ ಪರ ನ್ಯೂಝಿಲೆಂಡ್ ಹಾಗೂ ದಕ್ಷಿಣ ಆಫ್ರಿಕ ‘ಎ’ ತಂಡಗಳ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ವೃತ್ತಿಜೀವನದಲ್ಲಿ 53 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಅಯ್ಯರ್ 9 ಅರ್ಧಶತಕಗಳ ಸಹಿತ ಒಟ್ಟು 1,289 ರನ್ ಗಳಿಸಿದ್ದಾರೆ.

  ಹೈದರಾಬಾದ್‌ನ ಯುವ ಬೌಲರ್ ಸಿರಾಜ್ ರಣಜಿ ಟ್ರೋಫಿಯಲ್ಲಿ ಒಟ್ಟು 41 ವಿಕೆಟ್ ಪಡೆದು ಮೂರನೆ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅಂತರ್-ರಾಜ್ಯ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ 9 ವಿಕೆಟ್‌ಗಳನ್ನು ಹಾಗೂ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ಪರ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ದಕ್ಷಿಣ ಆಫ್ರಿಕ ಪ್ರವಾಸದ ವೇಳೆ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದ ಸಿರಾಜ್ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದರು.

 ಹೊಸದಿಲ್ಲಿಯಲ್ಲಿ ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಹಿರಿಯ ಬೌಲರ್ ಆಶೀಷ್ ನೆಹ್ರಾ ವಿದಾಯದ ಪಂದ್ಯವನ್ನಾಡುವ ಸಾಧ್ಯತೆಯಿದೆ.

ಭಾರತ-ನ್ಯೂಝಿಲೆಂಡ್ ನಡುವಿನ ಟ್ವೆಂಟಿ-20 ಸರಣಿಯು ನ.1, ನ.4 ಹಾಗೂ ನ.7 ರಂದು ನಡೆಯಲಿದೆ.

ವಿರಾಟ್ ಕೊಹ್ಲಿ ನೇತೃತ್ವದ 16 ಸದಸ್ಯರ ಟ್ವೆಂಟಿ-20 ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್, ಐವರು ವೇಗಿಗಳಾದ ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ ಕುಮಾರ್, ಆಶೀಷ್ ನೆಹ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಸಿರಾಜ್ ಅವರಿದ್ದಾರೆ.

ಭಾರತದ ಟ್ವೆಂಟಿ-20 ತಂಡ:

ವಿರಾಟ್ ಕೊಹ್ಲಿ(ನಾಯಕ),ರೋಹಿತ್ ಶರ್ಮ, ಜಸ್‌ಪ್ರಿತ್ ಬುಮ್ರಾ, ಯಜುವೇಂದ್ರ ಚಹಾಲ್, ಶಿಖರ್ ಧವನ್, ಎಂ.ಎಸ್. ಧೋನಿ(ವಿಕೆಟ್‌ಕೀಪರ್),ದಿನೇಶ್ ಕಾರ್ತಿಕ್, ಕುಲ್‌ದೀಪ್ ಯಾದವ್, ಭುವನೇಶ್ವರ ಕುಮಾರ್, ಆಶೀಷ್ ನೆಹ್ರಾ, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಮುಹಮ್ಮದ್ ಸಿರಾಜ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News