ಹಾಡಹಗಲೇ ಫುಟ್ಪಾತ್ ನಲ್ಲಿಯೇ ಮಹಿಳೆಯ ಅತ್ಯಾಚಾರ

Update: 2017-10-23 11:36 GMT

ಹೊಸದಿಲ್ಲಿ,ಅ.23 :  ಆಂಧ್ರ ಪ್ರದೇಶದ ವಿಶಾಖಪಟ್ಣಂ  ನಗರದ ಜನನಿಬಿಡ ರಸ್ತೆಯ  ಫುಟ್ಪಾತ್ ಒಂದರಲ್ಲಿ  ಮಹಿಳೆಯೊಬ್ಬಳ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ನಡೆದಿದ್ದು ಈ  ಘಟನೆಯ ವೀಡಿಯೋ ಕೂಡ ಬಹಿರಂಗಗೊಂಡಿದೆ. ಆರೋಪಿ 21 ವರ್ಷದ ಗಂಜಿ ಶಿವ ಎಂಬಾತನನ್ನು ಬಂಧಿಸಲಾಗಿದೆ. ಆತ ಮದ್ಯದ ನಶೆಯಲ್ಲಿ ಈ ಕೃತ್ಯವೆಸಗಿದ್ದಾನೆಂದು ಹೇಳಲಾಗಿದೆ.

                           (ಗಂಜಿ ಶಿವ)

ರವಿವಾರ ಅಪರಾಹ್ನ ನಡೆದ ಈ ಘಟನೆಯನ್ನು ಆಟೋಚಾಲಕನೊಬ್ಬ ಚಿತ್ರೀಕರಿಸಿದ್ದು  ಆತನೇ ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಸಂತ್ರಸ್ತೆಯು ರೈಲ್ವೆ ಕಾಲನಿ  ಸಮೀಪದ ಫುಟ್ಪಾತ್ ಒಂದರಲ್ಲಿ ಮರದ ಪಕ್ಕದಲ್ಲಿ ಕುಳಿತಿದ್ದಾಗಲೇ ಯುವಕ ಆಕೆಯ ಮೇಲೆ ಆಕ್ರಮಣ ನಡೆಸಿದ್ದಾನೆ. ಆದರೆ ಆರೋಪಿ ಮತ್ತು ಸಂತ್ರಸ್ತೆ ನೀಡಿದ ಹೇಳಿಕೆಗಳಲ್ಲಿ ಬಹಳಷ್ಟು ವೈರುದ್ಧ್ಯಗಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೀಡಿಯೋದಲ್ಲಿ ಜನರು ಅತ್ತಿಂದತ್ತ ಹೋಗುತ್ತಿದ್ದಂತೆಯೇ ಯುವಕ ಮಹಿಳೆಯ ಮೇಲೆ ಆಕ್ರಮಣಗೈದಿದ್ದು ಕಾಣಿಸುತ್ತದೆ.  ಈ ಘಟನೆಯ ವೀಡಿಯೋ ಚಿತ್ರೀಕರಣ ನಡೆಸಿದ ಆಟೋ ಚಾಲಕ  ಹಾಗೆ ಮಾಡುವ ಬದಲು ಮಹಿಳೆಯನ್ನು ರಕ್ಷಿಸುವ ಯತ್ನ ನಡೆಸಬಹುದಾಗಿತ್ತು ಎಂದು ಹಲವರು ಈಗ  ಹೇಳಲಾರಂಭಿಸಿದ್ದಾರೆ. ಆದರೆ ಈ ವೀಡಿಯೋ ಆಧಾರದಲ್ಲಿಯೇ ಪೊಲೀಸರು ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News