ಡಿಸೆಂಬರ್‌ನಲ್ಲಿ ಹೊಸ ಶಿಕ್ಷಣ ನೀತಿ : ಸತ್ಯಪಾಲ್ ಸಿಂಗ್

Update: 2017-10-23 13:38 GMT

ತಿರುವನಂತಪುರಂ, ಅ.23: ಪಾಳೇಗಾರಿಕೆ ಮನಸ್ಥಿತಿಯನ್ನು ಅನುಸರಿಸುವ ಹಾಲಿ ಶಿಕ್ಷಣ ವ್ಯವಸ್ಥೆಯನ್ನು ‘ಸರಿಪಡಿಸುವ’ ಕ್ರಮವಾಗಿ ನೂತನ ಶಿಕ್ಷಣ ನೀತಿಯನ್ನು ಡಿಸೆಂಬರ್‌ನಲ್ಲಿ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮಾನವಸಂಪನ್ಮೂಲ ಇಲಾಖೆಯ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.

ದೇಶಕ್ಕೆ ಸ್ವಾತಂತ್ರ ದೊರೆತ ಬಳಿಕವೂ ಬಹುತೇಕ ಶಿಕ್ಷಣ ತಜ್ಞರು ಬ್ರಿಟಿಷರ ಮತ್ತು ಪಾಶ್ಚಿಮಾತ್ಯ ವಿದ್ವಾಂಸರ ಶಿಕ್ಷಣಕ್ರಮವನ್ನೇ ಅನುಸರಿಸಿರುವುದು ದುರದೃಷ್ಟಕರ ಎಂದ ಅವರು, ಹೊಸಶಿಕ್ಷಣ ನೀತಿಯ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ತಿಳಿಸಿದರು. ಸಂಘಪರಿವಾರದ ಮುಖಂಡ ಹಾಗೂ ಭಾರತೀಯ ವಿಚಾರಕೇಂದ್ರದ ನಿರ್ದೇಶಕ ಪಿ.ಪರಮೇಶ್ವರನ್ ಅವರ ‘ನವತಿ’ (90ನೇ ವರ್ಷಾಚರಣೆ) ಆಚರಣೆ ಸಂದರ್ಭ ತಿರುವನಂತಪುರಂನಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಪ್ರಾಥಮಿಕ ಹಂತದಲ್ಲೇ ಶಿಕ್ಷಣದ ಗುಣಮಟ್ಟ ಸುಧಾರಿಸುವುದು, ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಹಾಗೂ ಎಲ್ಲರಿಗೂ ಸುಲಭದಲ್ಲಿ ಲಭ್ಯವಾಗಿಸುವುದು ಮುಂತಾದ ಅಂಶಗಳ ಬಗ್ಗೆ ಹೊಸ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗುವುದು. ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಅಮೆರಿಕದಲ್ಲಿ ಶೇ.86ರಷ್ಟು, ಜರ್ಮನಿಯಲ್ಲಿ ಶೇ.80ರಷ್ಟು ಮತ್ತು ಚೀನಾದಲ್ಲಿ ಶೇ.60ರಷ್ಟು ಆಗಿದ್ದರೆ ಭಾರತದಲ್ಲಿ ಈ ಪ್ರಮಾಣ ಕೇವಲ ಶೇ.25.6 ಆಗಿದೆ. ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ವಿದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.

 ಕೌಶಲ್ಯ ಅಭಿವೃದ್ಧಿ ಕ್ಷೇತ್ರದತ್ತ ಸರಕಾರ ಹೆಚ್ಚಿನ ಗಮನ ನೀಡಿದೆ ಎಂದ ಅವರು, ಉನ್ನತ ಶಿಕ್ಷಣ ಪಡೆಯಲು ತೊಡಕಾಗಿರುವ ಸಾಮಾಜಿಕ ಹಾಗೂ ಪ್ರಾದೇಶಿಕ ಅಸಮಾನತೆ ದೂರಗೊಳಿಸಿ , ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭ್ಯವಾಗಿಸುವ ಸವಾಲು ಸರಕಾರದ ಮುಂದಿದೆ ಎಂದರು.

ದೇಶದ ಕೆಲವು ಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಇರುವ ಅವಕಾಶದ ಪ್ರಮಾಣ ಶೇ.60 ಆಗಿದ್ದರೆ ಇನ್ನು ಕೆಲವು ಭಾಗಗಳಲ್ಲಿ ಕೇವಲ ಶೇ.9 ಆಗಿದೆ. ಈ ತಾರತಮ್ಯ ನಿವಾರಿಸಬೇಕಿದೆ ಎಂದ ಅವರು, ದೇಶದಾದ್ಯಂತ ವಿವಿಗಳಲ್ಲಿ ಶೇ.50ರಷ್ಟು ಶಿಕ್ಷಕರ ಹುದ್ದೆ ಖಾಲಿಯಿದೆ ಎಂದು ತಿಳಿಸಿದರು. ದೇಶದಲ್ಲಿ ಪ್ರತೀ ವರ್ಷ 30,000ದಿಂದ 40,000 ಮಂದಿ ಪಿಎಚ್‌ಡಿ ಪದವಿ ಪಡೆಯುತ್ತಿದ್ದರೂ ವಿಶ್ವದ ಆರ್ಥಿಕತೆಗೆ ನಮ್ಮ ದೇಶದ ಕೊಡುಗೆ ಕೇವಲ ಶೇ.0.2ರಷ್ಟು ಆಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯ ಅಗತ್ಯವಿದೆ ಎಂದರು.

‘ಹಲ್ಲಿಲ್ಲದ ಹುಲಿ’ಯಂತಿರುವ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆಯ ಅಗತ್ಯವಿದೆ. ಈ ಕಾಯ್ದೆಯು ಪ್ರಾಥಮಿಕ ಶಿಕ್ಷಣ ಪಡೆಯುವ ಹಕ್ಕನ್ನು ಕಡ್ಡಾಯಗೊಳಿಸಿದೆ. ಆದರೆ ಪೋಷಕರೇ ಮಕ್ಕಳನ್ನು ಶಾಲೆಗೆ ಕಳಿಸಲು ಒಪ್ಪದಿದ್ದರೆ ಆಗ ಏನು ಮಾಡಬೇಕು ಎಂಬುದರ ಬಗ್ಗೆ ಕಾಯ್ದೆಯಲ್ಲಿ ಮಾಹಿತಿಯಿಲ್ಲ. ಆದ್ದರಿಂದ ಕಾಯ್ದೆಯಲ್ಲಿ ಬದಲಾವಣೆ ಆಗಬೇಕಿದೆ ಮತ್ತು ದೇಶದಲ್ಲಿ ಪ್ರಾಥಮಿಕ ಶಿಕ್ಷಣದ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News