ಸಿರಿಯ ಯುದ್ಧದ ಭೀಕರತೆಗೆ ಸಾಕ್ಷಿಯಾದ ‘ಸಹಾರ್’

Update: 2017-10-23 16:19 GMT

ಹಮೂರಿಯ (ಸಿರಿಯ), ಅ. 23: ಸಿರಿಯದ ಪೂರ್ವ ಘೌಟಕ್ಕೆ ಸರಕಾರ ಮುತ್ತಿಗೆ ಹಾಕಿದ್ದು, ಹಸಿವಿನಿಂದಾಗಿ ಹಲವಾರು ಮಕ್ಕಳು ಮೃತಪಟ್ಟಿದ್ದಾರೆ ಹಾಗೂ ನೂರಾರು ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ.

ಇಲ್ಲಿ ಒಂದು ತಿಂಗಳ ಹೆಣ್ಣು ಶಿಶು ಸಹಾರ್ ರವಿವಾರ ಕೊನೆಯುಸಿರೆಳೆಯಿತು. ಮಗುವಿನ ಒಣಗಿದ ಚರ್ಮದ ಮೂಲಕ ಪಕ್ಕೆಲುಬುಗಳು ಹೊರಚಾಚಿದ್ದವು.

ಸಿರಿಯ ರಾಜಧಾನಿ ಡಮಾಸ್ಕಸ್‌ನ ಪೂರ್ವದಲ್ಲಿ ಬಂಡುಕೋರರ ನಿಯಂತ್ರಣದಲ್ಲಿರುವ ಈ ವಲಯಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಮಾನವೀಯ ನೆರವು ಲಭಿಸುತ್ತಿದೆ. ಸಿರಿಯದ ಅಧ್ಯಕ್ಷ ಬಶರ್ ಅಸಾದ್‌ರ ಸೈನಿಕರು 2013ರಿಂದ ಈ ವಲಯಕ್ಕೆ ಮುತ್ತಿಗೆ ಹಾಕಿದ್ದಾರೆ.

ಸಿರಿಯದಲ್ಲಿ ಮೇ ತಿಂಗಳಲ್ಲಿ ಸ್ಥಾಪಿಸಲಾದ ನಾಲ್ಕು ‘ಸಂಘರ್ಷರಹಿತ’ ವಲಯಗಳ ಪೈಕಿ ಪೂರ್ವ ಘೌಟವೂ ಒಂದು. ಸಿರಿಯದ ಆರು ವರ್ಷಗಳ ಆಂತರಿಕ ಯುದ್ಧದ ಎದುರಾಳಿಗಳ ನಡುವೆ ಏರ್ಪಟ್ಟ ಸಂಧಾನದ ಫಲವಾಗಿ ಈ ಸಂಘರ್ಷರಹಿತ ವಲಯಗಳನ್ನು ಸ್ಥಾಪಿಸಲಾಗಿತ್ತು.

ಆದರೆ, ಈ ವಲಯಕ್ಕೆ ಅಹಾರ ಸಾಮಗ್ರಿಗಳು ಪ್ರವೇಶಿಸುವುದು ಈಗಲೂ ಅಪರೂಪ. ಇಲ್ಲಿ ನೂರಾರು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ.

ಶನಿವಾರ, 34 ದಿನಗಳ ಪ್ರಾಯದ ಸಹಾರ್‌ಳನ್ನು ಹೆತ್ತವರು ಪೂರ್ವ ಘೌಟದ ಹಮೂರಿಯ ಪಟ್ಟಣದಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋದರು. ಮಗು ಅಳಲು ಪ್ರಯತ್ನಿಸಿತಾದರೂ, ಹೆಚ್ಚು ಧ್ವನಿ ಮಾಡುವ ಶಕ್ತಿಯನ್ನು ಹೊಂದಿರಲಿಲ್ಲ. ಮಗುವಿನ ತಾಯಿ ಪಕ್ಕದಲ್ಲೇ ದುಃಖಿಸುತ್ತಿದ್ದರು.

 ಘೌಟದ ನೂರಾರು ಮಕ್ಕಳಂತೆ ಸಹಾರ್ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು. ಮಗುವಿನ ತಾಯಿಯೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಮಗುವಿಗೆ ಎದೆ ಹಾಲು ಕೊಡುವ ಸ್ಥಿತಿಯಲ್ಲಿರಲಿಲ್ಲ. ಕಸಾಯಿಖಾನೆಯೊಂದರಲ್ಲಿ ಅಲ್ಪ ಸಂಬಳಕ್ಕಾಗಿ ದುಡಿಯುತ್ತಿರುವ ಮಗುವಿನ ತಂದೆಯೂ ಮಗುವಿಗೆ ಹಾಲು ಮತ್ತು ಇತರ ಪೌಷ್ಟಿಕಾಂಶಗಳನ್ನು ಕೊಡಿಸುವ ಸ್ಥಿತಿಯಲ್ಲಿಲ್ಲ.

ಸಹಾರ್ ರವಿವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.

ಶನಿವಾರ ಘೌಟದಲ್ಲಿ ಇನ್ನೊಂದು ಮಗು ಅಪೌಷ್ಟಿಕತೆಯಿಂದಾಗಿ ಕೊನೆಯುಸಿರೆಳೆಯಿತು ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಅತಿ ದುಬಾರಿ ಬೆಲೆಗಳು

‘‘ಘೌಟದ ನಿವಾಸಿಗಳು ತೀವ್ರ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ದಿನ ಬಳಕೆಯ ವಸ್ತುಗಳು ಲಭ್ಯವಾದರೆ, ಅವುಗಳ ಬೆಲೆ ಅತಿ ದುಬಾರಿಯಾಗಿರುತ್ತದೆ’’ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News