ಅ.24ರಂದು ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್ಸ್ ಟೂರ್ನಿ ಆರಂಭ

Update: 2017-10-23 18:31 GMT

ಹೊಸದಿಲ್ಲಿ, ಅ.23: ಭಾರತದ ಆತಿಥ್ಯದಲ್ಲಿ ಇದೇ ಮೊದಲ ಬಾರಿ ಆಯೋಜಿಸಲ್ಪಡುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್ಸ್ ಟೂರ್ನಿಯು ಮಂಗಳವಾರ ಆರಂಭವಾಗಲಿದೆ. ಡಬಲ್ ಟ್ರಾಪ್ ಶೂಟರ್ ಅಂಕುರ್ ಮಿತ್ತಲ್ ಹಾಗೂ ಪಿಸ್ತೂಲ್ ಶೂಟರ್ ಜಿತು ರಾಯ್ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಈ ಟೂರ್ನಿಯು ಒಲಿಂಪಿಕ್ಸ್ ಸ್ಪೋರ್ಟ್ಸ್‌ನಲ್ಲಿ ಭಾರತದ ಬೆಳವಣಿಗೆಯ ದ್ಯೋತಕವಾಗಿದ್ದು, ಆತಿಥೇಯ ಭಾರತವನ್ನು ಪ್ರತಿನಿಧಿಸಲಿರುವ ಅಗ್ರ ಶೂಟರ್‌ಗಳು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಭಾರತ ಇದೇ ಮೊದಲ ಬಾರಿ ಶೂಟಿಂಗ್ ವಿಶ್ವಕಪ್‌ನ ಆತಿಥ್ಯವಹಿಸಿ ಕೊಂಡಿದ್ದು, ನಾಲ್ಕು ಆವೃತ್ತಿಯ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡವನ್ನು ವಿಶ್ವಕಪ್ ಆತಿಥ್ಯಕ್ಕೆ ಆಯ್ಕೆ ಮಾಡಲಾಗುತ್ತದೆ.

15 ಸ್ಪರ್ಧೆಗಳಲ್ಲಿ ಸುಮಾರು 9 ಚಾಂಪಿಯನ್‌ಗಳು ಭಾಗವಹಿಸಲಿದ್ದಾರೆ. ಗ್ರೀಸ್‌ನ 21ರ ಹರೆಯದ ಏರ್‌ಪಿಸ್ತೂಲ್ ಚಾಂಪಿಯನ್ ಅನ್ನಾ ಕೊರಾಕಕಿ ಹಾಗೂ ಜರ್ಮನಿಯ ಕ್ರಿಸ್ಟಿಯನ್ ರಿಟ್ಝ್ ಪ್ರಶಸ್ತಿ ಸ್ಪರ್ಧೆಯಲ್ಲಿದ್ದಾರೆ. ಭಾರತದ ಪರ ಮೂರು ಸ್ಪರ್ಧೆಗಳಲ್ಲಿ ಒಟ್ಟು 10 ಸ್ಪರ್ಧಾಳುಗಳು ಭಾಗವಹಿಸಲಿದ್ದು, ವಿಶ್ವದ ನಂ.1 ಅಂಕುರ್ ಮಿತ್ತಲ್ ಹಾಗೂ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಹಾಗೂ ಮಾಜಿ ನಂ.1 ಶೂಟರ್ ಜಿತು ರಾಯ್ ಪ್ರಶಸ್ತಿಯ ಭರವಸೆ ಮೂಡಿಸಿದ್ದಾರೆ. ಚೀನಾದ ಪರ ಗರಿಷ್ಠ 26 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

2013ರ ಐಎಸ್‌ಎಸ್‌ಎಫ್ ಡಬ್ಲುಸಿಎಫ್ ಚಾಂಪಿಯನ್ ಹೀನಾ ಸಿಧು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಹಾಗೂ ಜೀತು ಅವರೊಂದಿಗೆ ಮಿಕ್ಸೆಡ್ ಟೀಮ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ 10 ಮೀ. ಏರ್ ರೈಫಲ್ ಇವೆಂಟ್‌ನಲ್ಲಿ ರವಿ ಕುಮಾರ್ ಹಾಗೂ ಪೂಜಾ ಘಾಟ್ಕರ್ ಸ್ಪರ್ಧಿಸಲಿದ್ದಾರೆ.

45 ಐಎಸ್‌ಎಸ್‌ಎಫ್ ಸದಸ್ಯ ಫೆಡರೇಶನ್‌ಗಳ ಒಟ್ಟು 162 ಅಥ್ಲೀಟ್‌ಗಳು ಭಾಗವಹಿಸಲಿದ್ದು, ಮಂಗಳವಾರದಿಂದ ರವಿವಾರ ತನಕ ನಡೆಯಲಿರುವ ಆರು ದಿನಗಳ ಸ್ಪರ್ಧೆಯಲ್ಲಿ 18 ಫೈನಲ್ಸ್‌ಗಳು ನಡೆಯಲಿವೆ. ಇದೇ ಮೊದಲ ಬಾರಿ ಮೂರು ಮಿಕ್ಸೆಡ್ ಟೀಮ್ ಇವೆಂಟ್ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News