ಶ್ರೀಲಂಕಾ ವಿರುದ್ದ ಕ್ಲೀನ್‌ಸ್ವೀಪ್ ಸಾಧಿಸಿದ ಪಾಕ್

Update: 2017-10-23 18:50 GMT

ಶಾರ್ಜಾ(ಯುಎಇ), ಅ.23: ಪಾಕ್‌ನ ಎಡಗೈ ಸ್ವಿಂಗ್ ಬೌಲರ್ ಉಸ್ಮಾನ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋತಿದೆ.

ಈ ಗೆಲುವಿನ ಮೂಲಕ ಪಾಕಿಸ್ತಾನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 5-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ. ಪಾಕ್ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 6ನೆ ಬಾರಿ ವೈಟ್‌ವಾಶ್ ಸಾಧನೆ ಮಾಡಿದೆ. ಝಿಂಬಾಬ್ವೆ(2002 ಹಾಗೂ 2008), ಬಾಂಗ್ಲಾದೇಶ(2003, 2008) ಹಾಗೂ ನ್ಯೂಝಿಲೆಂಡ್(2003)ವಿರುದ್ಧ ಈ ಸಾಧನೆ ಮಾಡಿದೆ.

ಪಾಕ್ ತಂಡ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಬಳಿಕ ಸತತ 9ನೆ ಪಂದ್ಯವನ್ನು ಜಯಿಸಿದೆ. ಈ ವರ್ಷ ದಕ್ಷಿಣ ಆಫ್ರಿಕ ಹಾಗೂ ಭಾರತ ವಿರುದ್ಧ 0-5 ಅಂತರದಿಂದ ಸರಣಿ ಸೋತಿರುವ ಶ್ರೀಲಂಕಾ ಸತತ 12ನೆ ಪಂದ್ಯವನ್ನು ಸೋತಿದೆ. ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ಉಸ್ಮಾನ್ ಖಾನ್(5-34), ಹಸನ್ ಅಲಿ(2-19) ಹಾಗೂ ಶಾದಾಬ್ ಖಾನ್(2-24)ದಾಳಿಗೆ ತತ್ತರಿಸಿ 26.2 ಓವರ್‌ಗಳಲ್ಲಿ 103 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಪ್ರಸ್ತುತ ಸರಣಿಯಲ್ಲಿ ಸತತ 5ನೆ ಬಾರಿ ಶ್ರೀಲಂಕಾ ಕನಿಷ್ಠ ಮೊತ್ತಕ್ಕೆ ಆಲೌಟಾಗಿದೆ. ಪಾಕ್ ವಿರುದ್ಧ 2ನೆ ಕನಿಷ್ಠ ಸ್ಕೋರ್ ದಾಖಲಿಸಿದೆ. 2002ರಲ್ಲಿ ಶಾರ್ಜಾದಲ್ಲಿ ಪಾಕ್ ವಿರುದ್ಧ ಕೇವಲ 78 ರನ್ ಗಳಿಸಿತ್ತು. ಗೆಲ್ಲಲು ಸುಲಭ ಸವಾಲು ಪಡೆದ ಪಾಕ್ 20.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು. ಇಂಝಮಾಮ್ ಉಲ್ ಹಕ್ ಅಳಿಯ ಇಮಾಮ್‌ವುಲ್‌ಹಕ್ ಅಜೇಯ 45 ರನ್ ಗಳಿಸಿದರು. ಫಖರ್ ಝಮಾನ್(48) ಅವರೊಂದಿಗೆ ಮೊದಲ ವಿಕೆಟ್‌ಗೆ 84 ರನ್ ಸೇರಿಸುವ ಮೂಲಕ ಉತ್ತಮ ಆರಂಭ ನೀಡಿದರು. ಸರಣಿಯ 4ನೆ ಏಕದಿನದಲ್ಲಿ ಚೊಚ್ಚಲ ಪಂದ್ಯವನ್ನಾಡಿರುವ ಪಾಕ್‌ನ ಉಸ್ಮಾನ್ ಖಾನ್ ಇಂದು ಶ್ರೀಲಂಕಾಕ್ಕೆ ಸಿಂಹಸ್ವಪ್ನರಾದರು.

ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಸಮರವಿಕ್ರಮ(0) ಹಾಗೂ ದಿನೇಶ್ ಚಾಂಡಿಮಾಲ್(0) ವಿಕೆಟ್‌ನ್ನು ಉಡಾಯಿಸಿದ ಉಸ್ಮಾನ್ ಸಿಂಹಳೀಯರಿಗೆ ಮರ್ಮಾಘಾತ ನೀಡಿದರು.

 ತಾನೆಸೆದ ಎರಡನೆ ಓವರ್‌ನಲ್ಲಿ ಲಂಕೆಯ ಇನ್ನೆರಡು ವಿಕೆಟ್‌ಗಳನ್ನು ಉಡಾಯಿಸಿದ ಉಸ್ಮಾನ್ 6.3ನೆ ಓವರ್‌ನಲ್ಲಿ ಮಿಲಿಂದ ಸಿರಿವರ್ಧನ ವಿಕೆಟ್ ಉಡಾಯಿಸಿ 5 ವಿಕೆಟ್ ಗೊಂಚಲು ಪಡೆದರು. ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಳೆದುಕೊಂಡಿರುವ ಶ್ರೀಲಂಕಾ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಸಂಪೂರ್ಣ ವಿಫಲವಾಯಿತು. ಶ್ರೀಲಂಕಾದ ಪರ ತಿಸಾರ ಪೆರೇರ(25) ಅಗ್ರ ಸ್ಕೋರರ್ ಎನಿಸಿಕೊಂಡರು. ಲಹಿರು ತಿರಿಮನ್ನೆ(19),ಸೀಕುಗೆ ಪ್ರಸನ್ನ(16)ಹಾಗೂ ಡಿ.ಚಾಮೀರ(11) ಎರಡಂಕೆಯ ಸ್ಕೋರ್ ದಾಖಲಿಸಿದರು. ಮೊದಲ ಬಾರಿ 5 ವಿಕೆಟ್ ಗೊಂಚಲು ಪಡೆದ ಉಸ್ಮಾನ್ ಖಾನ್ ಪಂದ್ಯಶ್ರೇಷ್ಠ ಹಾಗೂ ಸರಣಿಯುದ್ದಕ್ಕೂ ಬೌಲಿಂಗ್‌ನಲ್ಲಿ ಮಿಂಚಿದ್ದ ಹಸನ್ ಅಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಉಭಯ ತಂಡಗಳು 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲಿದ್ದು, ಪಂದ್ಯಗಳು ಅ.26, 27 ಹಾಗೂ 29 ರಂದು ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ: 26.2 ಓವರ್‌ಗಳಲ್ಲಿ 103 ರನ್‌ಗೆ ಆಲೌಟ್

(ತಿಸ್ಸಾರ ಪೆರೇರ 25, ತಿರಿಮನ್ನೆ 19, ಉಸ್ಮಾನ್ ಖಾನ್ 5-34, ಹಸನ್ ಅಲಿ 2-19, ಶಾದಾಬ್ ಖಾನ್ 2-24)

ಪಾಕಿಸ್ತಾನ: 20.2 ಓವರ್‌ಗಳಲ್ಲಿ 105/1

(ಫಖರ್ ಝಮಾನ್ 48, ಇಮಾಮ್-ಉಲ್-ಹಕ್ ಅಜೇಯ 45)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News