ಕೆಲಸ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ
ಬೆಂಗಳೂರು, ಅ.24: ಜಾಹೀರಾತು ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿ ಮಹಿಳೆಯ ಫೋಟೊ ಪಡೆದು ಅದನ್ನು ಅಶ್ಲೀಲ ಚಿತ್ರಕ್ಕೆ ಅಂಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುವುದಾಗಿ ಹೆದರಿಸುತ್ತಿದ್ದ ದುಷ್ಕರ್ಮಿಯನ್ನು ಬಂಧಿಸುವಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನಾರಾಯಣ ಪ್ರಭು ಎಂದು ಗುರುತಿಸಲಾಗಿದೆ.
ಇನ್ಫೆಂಟ್ರಿ ರಸ್ತೆಯಲ್ಲಿನ ಫ್ರಾಂಕ್ ಫಿನ್ ಇನ್‌ಸ್ಟಿಟ್ಯೂಟ್‌ನ ಉದ್ಯೋಗಿ ಆಗಿದ್ದ ಆರೋಪಿಯು ಕಳೆದ ಮೂರು ತಿಂಗಳ ಹಿಂದೆ ಅದೇ ಕಂಪನಿಗೆ ಕೆಲಸಕ್ಕೆ ಸೇರಿದ್ದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ.
ಬಳಿಕ ಜಾಹೀರಾತು ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ ಆಕೆಯ ಫೋಟೊಗಳನ್ನ ಪಡೆದು ಲೈಂಗಿಕ ಕ್ರಿಯೆಗೆ ಸಹಕರಿಸಬೇಕು, ಇಲ್ಲ ಹಣ ಕೊಡಬೇಕು ಇಲ್ಲದಿದ್ದರೆ ನಿನ್ನ ಫೋಟೊಗಳನ್ನ ನಗ್ನ ದೇಹಕ್ಕೆ ನಿನ್ನ ಮುಖ ಹಾಕಿ ಫೇಸ್‌ಬುಕ್ ವಾಟ್ಸಾಪ್‌ಗಳಲ್ಲಿ ಹಾಕಿ ನಿನ್ನ ಗಂಡನಿಗೂ ಕಳಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದ. ನೊಂದ ಮಹಿಳೆಯು ನೀಡಿದ ದೂರಿನನ್ವಯ ಆರೋಪಿ ನಾರಾಯಣ ಪ್ರಭುವನ್ನು ಕಮರ್ಷಿಯಲ್ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.