ಮಧ್ಯಪ್ರದೇಶದ ರಸ್ತೆಗಳು ಅಮೆರಿಕಾದ ರಸ್ತೆಗಳಿಗಿಂತಲೂ ಚೆನ್ನಾಗಿವೆ : ಮುಖ್ಯಮಂತ್ರಿ ಚೌಹಾಣ್

Update: 2017-10-25 08:50 GMT

ಹೊಸದಿಲ್ಲಿ,ಅ.25 : ಮಧ್ಯಪ್ರದೇಶದ ರಸ್ತೆಗಳು ಅಮೆರಿಕಾದ ರಸ್ತೆಗಳಿಗಿಂತಲೂ ಚೆನ್ನಾಗಿವೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ  ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಇತ್ತೀಚೆಗೆ ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಅಮೆರಿಕಾಕ್ಕೆ ಹೋಗಿದ್ದ ಸಂದರ್ಭ ಸಭೆಯೊಂದರಲ್ಲಿ ಭಾಗವಹಿಸಿದ್ದ ಚೌಹಾಣ್, ತಮ್ಮ ತವರು ರಾಜ್ಯದ ರಸ್ತೆಗಳು ಅಮೆರಿಕಾದ ರಸ್ತೆಗಳಿಗಿಂತ ಚೆನ್ನಾಗಿವೆ ಎಂದು ಹೇಳಿದ್ದಾರೆ.

``ನಾನು ವಾಷಿಂಗ್ಟನ್ ವಿಮಾನ ನಿಲ್ದಾಣದಲ್ಲಿಳಿದು  ರಸ್ತೆಗಳಲ್ಲಿ ಸಂಚರಿಸಿದಾಗ ಮಧ್ಯ ಪ್ರದೇಶದ ರಸ್ತೆಗಳು  ಇದಕ್ಕಿಂತ ಉತ್ತಮವಾಗಿದೆ ಎಂದು ನನಗನಿಸಿತು,'' ಎಂದು ತಮ್ಮ ರಾಜ್ಯದ ರಸ್ತೆಗಳ ಕಳಪೆ ನಿರ್ವಹಣೆಗೆ ವಿಪಕ್ಷಗಳಿಂದ ಈಗಾಗಲೇ ಸಾಕಷ್ಟು ಟೀಕೆಗೆ ಗುರಿಯಾಗಿರುವ ಚೌಹಾಣ್ ಅಮೆರಿಕಾದಲ್ಲಿ ಸಭೆಯೊಂದರಲ್ಲಿ ಭಾಗವಹಿಸುತ್ತಾ ಹೇಳಿದ್ದಾರೆ.

ಮುಖದಲ್ಲಿ ದೊಡ್ಡ ನಗುವೊಂದನ್ನು ತಂದುಕೊಳ್ಳುತ್ತಾ ``ಹೇಳಬೇಕೆಂಬ ಕಾರಣಕ್ಕೆ ಮಾತ್ರ ನಾನು  ಇದನ್ನು ಹೇಳುತ್ತಿಲ್ಲ,'' ಎಂದು ವಿವರಿಸಿದರಲ್ಲದೆ  ತಮ್ಮ ಸರಕಾರ  ರಾಜ್ಯದಲ್ಲಿ 1.75 ಕಿಮೀ ಉದ್ದದ ರಸ್ತೆಗಳನ್ನು ನಿರ್ಮಿಸಿದ್ದಾಗಿ ಹಾಗೂ ಪ್ರತಿಯೊಂದು ಗ್ರಾಮಕ್ಕೂ ರಸ್ತೆ ಸಂಪರ್ಕ ಒದಗಿಸಿದ್ದಾಗಿ ಅವರು ಹೇಳಿದರು.

ಅಮೆರಿಕಾದಲ್ಲಿ  ಒಟ್ಟು 65.8 ಲಕ್ಷ ಕಿಮೀಗೂ ಅಧಿಕ ಉದ್ದದ ರಸ್ತೆಗಳಿದ್ದು ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ರಸ್ತೆ ಸಂಪರ್ಕ ಜಾಲವಾಗಿದೆ. ತಮ್ಮ ರಾಜ್ಯದ ರಸ್ತೆಗಳು ಅಮೆರಿಕಾದ ರಸ್ತೆಗಳಿಗಿಂತ ಉತ್ತಮವಾಗಿದೆ ಎಂದು ಚೌಹಾಣ್ ಹೇಳಿದರು.

ರಾಜ್ಯ ರಾಜಧಾನಿ ಭೋಪಾಲ್ ಸಹಿತ ಹಲವೆಡೆ ರಸ್ತೆಗಳು ಹೊಂಡಗುಂಡಿಗಳಿಂದ ತುಂಬಿರುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರವಾಗಿದೆ. ಪರಿಸ್ಥಿತಿ ಹೀಗಿರುವಾಗಲೂ ಮುಖ್ಯಮಂತ್ರಿಯ ಹೇಳಿಕೆ ಹಲವರ ಹುಬ್ಬೇರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News