×
Ad

ಕರ್ತವ್ಯ ನಿರ್ಲಕ್ಷ್ಯ: ಮೂವರು ಅಧಿಕಾರಿಗಳ ಅಮಾನತ್ತಿಗೆ ಮೇಯರ್ ಸೂಚನೆ

Update: 2017-10-25 20:11 IST

ಬೆಂಗಳೂರು, ಅ. 25: ಸಾರ್ವಜನಿಕರ ದೂರುಗಳನ್ನು ಆಲಿಸದೆ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಕರ್ತವ್ಯ ಲೋಪವೆಸಗಿದ ಇಬ್ಬರು ಇಂಜಿನಿಯರ್‌ಗಳು ಸೇರಿದಂತೆ ಮೂವರು ಪಾಲಿಕೆ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಆದೇಶಿಸಿದ್ದಾರೆ.

ನಿನ್ನೆ ರಾತ್ರಿ 11.30ರ ವೇಳೆ ಹಠಾತ್ ಬೊಮ್ಮನಹಳ್ಳಿ ವಲಯದ ನಿಯಂತ್ರಣದ ಕೊಠಡಿಗೆ ಮೇಯರ್ ಸಂಪತ್‌ರಾಜ್ ಭೇಟಿ ನೀಡಿದ ವೇಳೆ ಕರ್ತವ್ಯದಲ್ಲಿರಬೇಕಾದ ಇಂಜಿನಿಯರ್‌ಗಳು ಅಲ್ಲಿ ಹಾಜರಿರಲಿಲ್ಲ. ಹೀಗಾಗಿ ಮೇಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಿಯಂತ್ರಣ ಕೊಠಡಿಯಲ್ಲಿ ಯಾರು ಇಲ್ಲದಿರುವುದು ಹಾಗೂ ವಾಕಿಟಾಕಿಯನ್ನು ಸ್ಥಗಿತಗೊಳಿಸಿದ್ದಕ್ಕೆ ಸಿಟ್ಟಿಗೆದ್ದ ಮೇಯರ್ ಸಂಪತ್ ರಾಜ್ ಮೂವರನ್ನು ತಕ್ಷಣವೇ ಅಮಾನತು ಗೊಳಿಸಬೇಕೆಂದು ಸ್ಥಳದಲ್ಲಿ ಆದೇಶ ಹೊರಡಿಸಿದ್ದಾರೆ.

ಬೊಮ್ಮನಹಳ್ಳಿ ವಲಯದ ರಾಮಪ್ರಸಾದ್, ಎ.ಇ.ಕುಮಾರ್ ಹಾಗೂ ಹಿರಿಯ ಆರೋಗ್ಯಾಧಿಕಾರಿ ಕುಮಾರ್ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.

ಬಿಬಿಎಂಪಿಯ ಎಲ್ಲ ವಲಯದ ನಿಯಂತ್ರಣ ಕೊಠಡಿಗಳಿಗೆ ನಿಯೋಜಿಸಲ್ಪಟ್ಟ ಇಂಜಿನಿಯರುಗಳು ಮತ್ತು ಆರೋಗ್ಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳುವುದು ಎಂದು ಅವರು ಎಚ್ಚರಿಸಿದರು.

ಮಳೆಗಾಲದ ವೇಳೆ ಸಾಕಷ್ಟು ಅನಾಹುತ ಸಂಭವಿಸಿದೆ. ಹೀಗಾಗಿ ಯಾವುದೇ ಅಂತ್ಯದಲ್ಲಿ ಎದುರಾಗುವ ಅನಾಹುತಗಳನ್ನು ತಪ್ಪಿಸಲು ಅಧಿಕಾರಿಗಳು ಕರ್ತವ್ಯದಲ್ಲಿ ಹಾಜರಿರಬೇಕು. ಇಲ್ಲದಿದ್ದಲ್ಲಿ ಶಿಸ್ತುಕ್ರಮ ಅನಿವಾರ್ಯವೆಂದು ಎಚ್ಚರಿಸಿದರು. ಯಾವುದೇ ನಿಯಂತ್ರಣ ಕೊಠಡಿಗಳಿಗೆ ಯಾವುದೇ ವೇಳೆ ಭೇಟಿ ನೀಡುತ್ತೇನೆ. ಅಧಿಕಾರಿಗಳು ಕರ್ತವ್ಯಕ್ಕೆ ಗೈರುಹಾಜರಾಗಬಾರದು ಎಂದು ಸೂಚಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News