ದುಷ್ಕರ್ಮಿಗಳಿಂದ ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಬೆಂಗಳೂರು, ಅ.25: ಭೂ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಿಗೂರಿನಲ್ಲಿ ನಡೆದಿದೆ.
ಕಿತ್ತಿಗನೂರು ಜಿಲ್ಲಾ ಪಂಚಾಯತ್ ಸದಸ್ಯ ಜಯರಾಮ್ ಹಲ್ಲೆಗೊಳಗಾದವರೆಂದು ಗುರುತಿಸಲಾಗಿದೆ.
ಭೂ ವಿವಾದ ಹಿನ್ನೆಲೆಯಲ್ಲಿ ರೌಡಿ ಶೀಟರ್ ವಾಲೆ ಮಂಜು ಹಾಗೂ ಸಹಚರರ ಗುಂಪು ಮಧ್ಯಾಹ್ನ ಕಾರ್ಯನಿಮಿತ್ತ ಮನೆಯಿಂದ ಕಾರಿನಲ್ಲಿ ತೆರಳುವಾಗ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪರಾರಿಯಾಗುವ ವೇಳೆ ದುಷ್ಕರ್ಮಿ ಗುಂಪಿನಲ್ಲಿದ್ದ ಒರ್ವ ಆರೋಪಿಯು ಕಿತ್ತಗನೂರು ಗ್ರಾಮಸ್ಥರ ಕೈ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಆರೋಪಿಗೆ ಗ್ರಾಮಸ್ಥರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಜಯರಾಮ್ ರಾಮಮೂರ್ತಿ ನಗರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.